ಬೆಂಗಳೂರು: ಸುಮಾರು 20 ಆಸ್ಪತ್ರೆಗಳನ್ನು ಅಲೆದಾಡಿದರೂ ಬೆಡ್ ವ್ಯವಸ್ಥೆ ಸಿಗದ ಕಾರಣ ಕೊರೊನಾ ಸೋಂಕಿತನ ಕುಟುಂಬವೊಂದು ಸಿಎಂ ನಿವಾಸದ ಎದುರು ಬೆಡ್ ಗಾಗಿ ಕಣ್ಣೀರಿಟ್ಟು ಧರಣಿ ಕುಳಿತಿತ್ತು.
ಸೋಂಕಿತನ ಸಮೇತವಾಗಿ ಆಂಬುಲೆನ್ಸ್ ನಲ್ಲಿ ಬಂದ ಕುಟುಂಬವೊಂದು ಸಿಎಂ ’ಕಾವೇರಿ’ ನಿವಾಸದ ಎದುರು ಬೆಡ್ ಗಾಗಿ ಬೇಡಿಕೆಯಿಟ್ಟಿತ್ತು. ಈ ವೇಳೆ ಸೋಂಕಿತನ ಪತ್ನಿ ನಾವು ಹಣ ಕೊಡಲು ಸಿದ್ಧರಿದ್ದೇವೆ. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಿಕೊಟ್ಟು ನನ್ನ ಪತಿಯ ಪ್ರಾಣ ಉಳಿಸಿ ಎಂದು ಗೋಗರೆದಿದ್ದರು. ಸಿಎಂ ಸೂಚನೆ ಮೇರೆಗೆ ಪೊಲೀಸರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆ ಮಾಡಿ ಸೋಂಕಿತನಿಗೆ ಬೆಡ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೂ ಸೋಂಕಿತನ ಪ್ರಾಣ ಉಳಿದಿಲ್ಲ.
ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸೋಂಕಿತ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಖುದ್ದು ಸಿಎಂ ಸೋಂಕಿತನಿಗೆ ಬೆಡ್ ವ್ಯವಸ್ಥೆ ಮಾಡಿಸಿದರೂ ವ್ಯಕ್ತಿಯ ಪ್ರಾಣ ಮಾತ್ರ ಉಳಿಯಲಿಲ್ಲ.