ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುತ್ತಾಳೆ ಎಂದು ಕುತೂಹಲದಿಂದ ಕಾಯಲಾಗಿತ್ತು. ಆದರೆ ಯುವತಿ ಇಂದು ಕೋರ್ಟ್ ಮುಂದೆ ಹಾಜರಾಗಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಸಿಡಿ ಯುವತಿಯ ಪರ ವಕೀಲ ಜಗದೀಶ್ ಸಲ್ಲಿಸಿರುವ ಅರ್ಜಿ ಸಿಎಂಎಂ – ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಮುಂದಿದೆ. ಯುವತಿ ಹಾಜರು ಪಡಿಸಲು ನ್ಯಾಯಾಲಯ ಇನ್ನೂ ಅನುಮತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ಕೋರ್ಟ್ ಕಲಾಪದ ಅವಧಿ ಕೂಡ ಈಗ ಮುಕ್ತಾಯವಾಗಿರುವುದರಿಂದ ಕೋರ್ಟ್ ಮುಂದೆ ಯುವತಿ ಇಂದು ಹಾಜರಾಗುವುದು ಅನುಮಾನವಾಗಿದೆ.
ಸಿಡಿ ಪ್ರಕರಣ; ರಮೇಶ್ ಜಾರಕಿಹೊಳಿ ವಿಚಾರಣೆ ಅಂತ್ಯ – ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಸಾಹುಕಾರ್
ಈ ನಡುವೆ ಸುದ್ದಿಗಾರರೊಂದಿಗೆ ಪ್ರತಿಕ್ರಿಸಿರುವ ಸಿಡಿ ಯುವತಿ ಪರ ವಕೀಲ ಜಗದೀಶ್, ಆರೋಪಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ನಮ್ಮ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಹಾಗಾಗಿ ನಾನು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಯುವತಿಯನ್ನು ಕೋರ್ಟ್ ಗೆ ಇಂದೇ ಹಾಜರಿಪಡಿಸಿ ಎಂದು ಹೇಳಿದರೆ ಇಂದೇ ಹಾಜರುಪಡಿಸುತ್ತೇವೆ. ಕೋರ್ಟ್ ಆದೇಶ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.