ಬೆಂಗಳೂರು: ಇಂಗ್ಲೆಂಡ್ ನಲ್ಲಿ ಕೊರೊನಾ ರೂಪಾಂತರ ಪ್ರಭೇದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೊಸ ವೈರಸ್ ಆತಂಕ ಹೆಚ್ಚಿದ್ದು, ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ವೈರಸ್ ನ ಹೊಸ ರೂಪಾಂತರ ಪತ್ತೆಯಾಗಿರುವುದರಿಂದ ಯುಕೆಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ನಾಳೆಯಿಂದ ಡಿಸೆಂಬರ್ 31ರವರೆಗೆ ರದ್ದು ಮಾಡಲಾಗಿದೆ. ಈಗಾಗಲೇ ಭಾರತಕ್ಕೆ 138 ಪ್ರಯಾಣಿಕರು ಬಂದಿದ್ದು, ಅವರೆಲ್ಲರೂ ಕಡ್ಡಾಯವಾಗಿ ಐಸೋಲೇಷನ್ ಹಾಗೂ ಕ್ವಾರಂಟೈನ್ ಗೆ ಒಳಗಾಗಬೇಕು ಎಂದರು.
ಹೊಸ ವೈರಾಣು ಕೊರೊನಾಗಿಂತ ಬಹುಬೇಗನೆ ಹರಡುತ್ತದೆ ಎಂಬ ವರದಿ ಬಂದಿದ್ದು, ರಾಜ್ಯದ ಜನತೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಾಸ್ಕ್ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಆದರೆ ಹೊಸ ವೈರಸ್ ಬಗ್ಗೆ ಎಚ್ಚರದಿಂದ ಇರುವುದು ಒಳಿತು ಹಾಗಾಗಿ ಎಲ್ಲರೂ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದರು.
ಇನ್ನು ವಿದೇಶದಿಂದ ಬರುವವರು ಕಡ್ಡಾಯವಾಗಿ ಆರ್ ಟಿ ಪಿ ಸಿ ಆರ್ ಟೆಸ್ಟ್ ಗೆ ಒಳಪಡಬೇಕು. ನಾಳೆಯಿಂದ ಎಲ್ಲಾ ವಿಮಾನ ನಿಲ್ದಾನಗಳಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುವುದು ಅಲ್ಲದೇ ವಿದೇಶದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು.