ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆಂಭವಾಗಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣದ ಕುರಿತು ಇಂದು ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ತಜ್ಞರಿಂದ ಅಧಿಕೃತ ವರದಿ ಬಂದ ಬಳಿಕ ಸಿಎಂ ಯಡಿಯೂರಪ್ಪ ಈ ಬಗ್ಗೆ ನಿರ್ಧರಿಸುತ್ತಾರೆ. ಲಾಕ್ ಡೌನ್ ವಿಚಾರ ಹಾಗೂ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಅಧಿಕೃತ ವರದಿ ನೀಡುವಂತೆ ತಜ್ಞರನ್ನು ಕೇಳಲಾಗಿದೆ. ಆ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ತಲುಪಿಸಲಿದ್ದು, ಅವರೊಂದಿಗೆ ಅಂತಿಮವಾಗಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಸಾಮಾನ್ಯವಾಗಿ ಕೊರೊನಾ ಒಂದು ಅಲೆ 80-120 ದಿನಗಳ ಕಾಲ ಇರಲಿದೆ. ಇದು ಕೇವಲ ಆರಂಭ ಮಾತ್ರ. 2-3 ವಾರಗಳಲ್ಲಿ ಅಂದರೆ ಮೇ 2ನೇ ವಾರದಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಲಿದೆ ಎಂದು ಸಲಹಾ ಸಮಿತಿ ಮಾಹಿತಿ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಜೊತೆ ಸವಿಸ್ತಾರವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಹಬ್ಬಗಳಿಗೆ ನಗರಗಳಿಂದ ಊರುಗಳಿಗೆ ಜನರು ಹೋಗುತ್ತಿದ್ದಾರೆ. ಕೊರೊನಾ ವಿಚಾರದಲ್ಲಿ ಅಗತ್ಯ ಮುಂಜಾಗೃತೆ ವಹಿಸುವುದು ಮುಖ್ಯ. ಸಾಕಷ್ಟು ಜನರಿಗೆ ಕೊರೊನಾ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 10 ದಿನಗಳ ಬಳಿಕ ಸೋಂಕಿನ ಲಕ್ಷಣ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಹೇಳಿದರು.