ದಾವಣಗೆರೆ: 2018 ರ ಅಕ್ಟೋಬರ್ ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆಯ ಆರೋಗ್ಯ ಕಾರ್ಯಕ್ರಮದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ(ಎಬಿ-ಎಆರ್‍ಕೆ) ಯೋಜನೆ ಜಾರಿಗೆ ಬಂದಿದೆ.
ಈ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ 1 ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿರುತ್ತದೆ. ಅದೇ ರೀತಿ ಎಪಿಎಲ್ ಕುಟುಂಬಗಳು ಚಿಕಿತ್ಸೆಗೆ ತಗುಲಿದ ಒಟ್ಟು ಬಿಲ್ಲಿನ ದರದಲ್ಲಿ ಶೇ.30 ರಷ್ಟು ವಾರ್ಷಿಕ ಪ್ರತಿ ಕುಟುಂಬಕ್ಕೆ ರೂ.1.5 ಲಕ್ಷದವರೆಗೆ ಉಚಿತವಾಗಿ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಯನ್ನು ಪಡೆಯಬಹುದಾಗಿರುತ್ತದೆ.
ಕೋವಿಡ್-19 ಗೆ ಉಚಿತ ಚಿಕಿತ್ಸೆ :
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್‍ಕೆ) ಯೋಜನೆಯಡಿ ದೃಢಪಟ್ಟ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ನೋಂದಾಯಿತ ಖಾಸಗಿ ನರ್ಸಿಂಗ್ ಹೋಂ/ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.
ಕಾರ್ಡ್ ಎಲ್ಲೆಲ್ಲಿ ಲಭ್ಯ?
ಜಿಲ್ಲೆಯ ಸಾಮಾನ್ಯ ಸೇವಾ ಸಿಂಧು ಕೇಂದ್ರಗಳು, ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಬಾಪೂಜಿ ಸೇವಾ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ ಹಾಘೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್‍ಗಳನ್ನು ನೋಂದಾಯಿಸಿ ನೀಡಲಾಗುತ್ತಿದ್ದು, ಕಾರ್ಡ್ ಪಡೆಯಲು ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು, ಕೈಗಳಿಗೆ ಮದ್ಯಸಾರ ಆಧಾರಿತ (ಸ್ಯಾನಿಟೈಸರ್) ದ್ರಾವಣದಿಂದ ಬಯೋಮೆಟ್ರಿಕ್ ಪರೀಕ್ಷೆಗೆ ಒಳಗಾಗುವ ಮುನ್ನ ಮತ್ತು ನಂತರ ಶುಚಿಗೊಳಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಚಿಕಿತ್ಸೆಗಳ ಲಭ್ಯತೆ:
ಕೋವಿಡ್ -19 ರ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ (ನಿಗದಿತ ಕೋವಿಡ್ ಆಸ್ಪತ್ರೆ) ಹಾಗೂ ಎಬಿ-ಎಆರ್‍ಕೆ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆ/ನರ್ಸಿಂಗ್ ಹೋಂಗಳಲ್ಲಿಯೂ ಕೂಡ ಕೋವಿಡ್ ದೃಢಪಟ್ಟ ರೋಗಿಗೆ ಉಚಿತ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು ಎಬಿ-ಎಆರ್‍ಕೆ ಕಾರ್ಡ್‍ಗಳನ್ನು ತ್ವರಿತವಾಗಿ ನೋಂದಾಯಿಸಿ ಪಡೆದುಕೊಳ್ಳಬಹುದು.
ಈ ಯೋಜನೆಯಡಿ ನಾನ್-ಕೋವಿಡ್ ರೋಗಿಗಳಿಗೆ 1650 ಖಾಯಿಲೆಗಳಿಗೆ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಅದರಲ್ಲಿ ಸಾಮಾನ್ಯ ದ್ವಿತೀಯ ಹಂತದ 291, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸೆ ವಿಧಾನಗಳು, ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫೆರಲ್ ಚೀಟಿ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.