ರಾಜ್ಯಸಭೆ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಶಾಕ್ ನೀಡಿದ್ದಾರೆ.
ರಾಜ್ಯಸಭೆ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದ ನಾಯಕರು ಮತ್ತು ಲಾಬಿ ನಡೆಸಿದವರು ಹಾಗೂ ಶಿಫಾರಸು ಮಾಡಿದ ರಾಜ್ಯ ಕೋರ್ ಕಮಿಟಿಗೆ ಕೂಡ ವರಿಷ್ಠರ ನಿರ್ಧಾರ ಅಚ್ಚರಿ ತಂದಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳಾಗಿ ಪ್ರಭಾಕರ ಕೋರೆ, ರಮೇಶ್ ಕತ್ತಿ, ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಕೇಂದ್ರ ಸಮಿತಿಗೆ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದು, ಆದರೆ ಅಚ್ಚರಿಯ ನಿರ್ಧಾರ ಕೈಗೊಂಡ ಬಿಜೆಪಿ ವರಿಷ್ಠರು ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ.
ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಹೆಸರುಗಳನ್ನು ತಿರಸ್ಕರಿಸಿ ಪಕ್ಷ ನಿಷ್ಠ ಕಾರ್ಯಕರ್ತರಿಗೆ ಸಂದೇಶ ರವಾನಿಸಿದೆ. ಬಂಡಾಯದ ಬೆದರಿಕೆ ಹಾಕಿದವರಿಗೆ ಬಿಸಿ ಮುಟ್ಟಿಸಿದೆ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ.
ಅಂದ ಹಾಗೆ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಮೇಶ್ ಕತ್ತಿ, ಪ್ರಭಾಕರ ಕೋರೆ, ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೂಚನೆ ಮೇರೆಗೆ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಈ ಮೂಲಕ ಅವರು ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.