ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಲೀಗಲ್ ನೋಟಿಸ್ ನೀಡಿರುವ ವಿಚಾರ ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆ ಇದೆ.
ವಿರೋಧಪಕ್ಷಕ್ಕೆ ಲೀಗಲ್ ನೋಟಿಸ್ ನೀಡಿದ ಬಿಜೆಪಿಗೆ ತಿರುಗುಬಾಣವಾಗಲಿದೆ ಎನ್ನಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಯಿಂದ ಲೀಗಲ್ ನೋಟೀಸ್ ನೀಡಲಾಗಿದ್ದು, ನೋಟಿಸ್ ನೀಡಿದ ಕ್ರಮದ ಬಗ್ಗೆ ಪಕ್ಷದಲ್ಲಿ ಸಹಮತ ಮೂಡಿಲ್ಲವೆನ್ನಲಾಗಿದೆ.
ರಾಜಕೀಯ ಆರೋಪಕಷ್ಟೇ ಸೀಮಿತವಾಗಿ ವಿಚಾರ ಮುಗಿಸಬೇಕಿತ್ತು. ಆದರೆ ಅನಗತ್ಯವಾಗಿ ವಿಚಾರ ಮೈಮೇಲೆ ಎಳೆದುಕೊಂಡಂತಾಗಿದೆ ಎಂದು ಆಡಳಿತ ಪಕ್ಷ ಬಿಜೆಪಿ ನಾಯಕರಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಲೀಗಲ್ ನೋಟಿಸ್ ನೀಡುವುದು ಬೇಡವಾಗಿತ್ತು ಎಂದೆಲ್ಲಾ ಚರ್ಚೆ ನಡೆದಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಕೂಡ ಆಪ್ತರ ಬಳಿ ಈ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಲೀಗಲ್ ನೋಟಿಸ್ ಸ್ವೀಕರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಆರೋಪಕ್ಕೆ ಮುಕ್ತಾಯವಾಗಬಹುದಾಗಿದ್ದ ಕೇಸ್ ಗೆ ಈಗ ಆಡಳಿತ ಪಕ್ಷ ಬಿಜೆಪಿಯೇ ಜೀವ ಕೊಟ್ಟಂತಾಗಿದೆ. ಕಾಂಗ್ರೆಸ್ ತನಿಖೆಗೆ ಒತ್ತಾಯಿಸಿದರೆ ಸರ್ಕಾರಕ್ಕೆ ಸಂಕಷ್ಟ ಶುರುವಾಗಲಿದೆ. ಹೀಗಾಗಿ ಲೀಗಲ್ ನೋಟಿಸ್ ಬೇಡವಾಗಿತ್ತು ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಗಮನಕ್ಕೆ ತಂದು ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದು, ಹೀಗಿದ್ದರೂ, ನೋಟಿಸ್ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆದಿದೆ ಎನ್ನಲಾಗಿದೆ.