ಬೆಂಗಳೂರು: ನಾನು ಬದುಕಿರುವರೆಗೂ ಯಾವುದೇ ಪಕ್ಷದ ಜೊತೆ ಜೆಡಿಎಸ್ ವಿಲೀನ ಪ್ರಶ್ನೆಯೇ ಇಲ್ಲ. 2023ಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದೇ ನನ್ನ ಗುರಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಜೊತೆ ಜೆಡಿಎಸ್ ವಿಲೀನ ಪ್ರಸ್ತಾಪವೇ ಇಲ್ಲ. ದೇಶದಲ್ಲಿ ಯಾವ ಪಕ್ಷಕ್ಕೂ ಯಾವುದೇ ಸಿದ್ಧಾಂತಗಳಿಲ್ಲ. ಎಲ್ಲಾ ಪಕ್ಷಗಳೂ ಅಧಿಕಾರ ಹೇಗೆ ಹಿಡಿಯಬೇಕು ಎಂದು ನೋಡುತ್ತಿರುತ್ತವೆ. 60 ವರ್ಷದ ರಾಜಕಾರಣದಲ್ಲಿ ದೇವೇಗೌಡರು ಅಧಿಕಾರದಲ್ಲಿದ್ದದ್ದು ಕೇವಲ 4-5 ವರ್ಷಗಳು ಮಾತ್ರ ಎಂದು ಹೇಳಿದರು.
ಇದೇ ವೇಳೆ ವಿಪಕ್ಷ ನಾಯಕ ಸಿದರಾಮಯ್ಯ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಸಿದ್ದರಾಮಯ್ಯ ನನ್ನ ಋಣದಲ್ಲಿದ್ದಾರೆ. ನನ್ನ ಹಣ ಖರ್ಚು ಮಾಡಿ ಅವರನ್ನು ಡಿಸಿಎಂ ಮಾಡಿದ್ದೆ. ಅಧಿಕಾರದ ಆಸೆಗಾಗಿ ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನನ್ನ ಸಿಎಂ ಮಾಡುವಾಗ ಸಿದ್ದರಾಮಯ್ಯ ಅವರ ದುಡಿಮೆಯಿಲ್ಲ. 2004ರಲ್ಲಿ ಅವರನ್ನು ಅಧಿಕಾರಕ್ಕೆ ತರಲು ನನ್ನ ಶ್ರಮವಿದೆ. ಸಿದ್ದರಾಮಯ್ಯ ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.