ಬೆಂಗಳೂರು: ರೂಪಾಂತರ ಕೊರೊನಾ ಆತಂಕದ ನಡುವೆಯೇ ಹೊಸ ವರ್ಷಾಚರಣೆಗೆ ಜಾರಿಗೆ ತಂದಿದ್ದ ಸರ್ಕಾರದ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ಇದೀಗ ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೆ ಬರಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದ ಜಾರಿಗೆ ಬರಲಿದ್ದ ನಿಷೇಧಾಜ್ಞೆಯನ್ನು ಮಧ್ಯಾಹ್ನ 12ಗಂಟೆಯಿಂದ ಜಾರಿಗೆ ತರಲಾಗುತ್ತಿದೆ. ಹೀಗಾಗಿ ಸಿಲಿಕಾನ್ ಸಿಟಿ ಇಂದು ಮಧ್ಯಾಹ್ನದಿಂದಲೇ ಸ್ತಬ್ಧಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ಮಧ್ಯಾಹ್ನ 12 ಗಂಟೆಯಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಯಾಗಲಿದ್ದು, ರಾತ್ರಿ 10 ಗಂಟೆ ಬಳಿಕ ಬೆಂಗಳೂರಿನ ಎಲ್ಲ ಫ್ಲೈ ಒವರ್ ಗಳು ಬಂದ್ ಆಗಲಿವೆ. ಬೆಂಗಳೂರಿನಾದ್ಯಂತ ಖಾಕಿ ಕಣ್ಗಾವಲು ಹಾಕಲಾಗಿದ್ದು, ನಿಯಮ ಉಲ್ಲಂಘಸಿದರೆ ಐಪಿಸಿ ಸೆಕ್ಷನ್ 188, ಎನ್ ಡಿ ಎಂ ಎ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.