ಬೆಂಗಳೂರು: ರೂಪಾಂತರ ಕೊರೊನಾ ಆತಂಕದ ನಡುವೆಯೇ ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, 5 ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ.
ಬೆಂಗಳೂರಿನಲ್ಲಿ ನಾಳೆ ಸಂಜೆ 6 ಗಂಟೆಯಿಂದ 144 ಸೆಕ್ಷನ್ ಜಾರಿಗೊಳಿಸಲಾಗುತ್ತಿದ್ದು, ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ಹಾಕಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಹೊಸ ವರ್ಷದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಆಚರಿಸಲಾಗುತ್ತಿದ್ದ ಎಲ್ಲಾ ಸ್ಥಳಗಳಲ್ಲಿ ನಿಷೇಧ ಹೇರಲಾಗಿದ್ದು, ಜನರು ಸೇರಲು ಅವಕಾಶವಿಲ್ಲ. ಡಿಜೆ, ಮ್ಯೂಸಿಕ್ ಶೋಗಳಿಗೆ ನಿರ್ಬಂಧ ಹೇರಳಾಗಿದೆ. ಪಬ್, ರೆಸ್ಟೋರೆಂಟ್ ಗಳ ಮೇಲೆ ಪೊಲೀಸರ ಹದ್ದಿನ ಕಣ್ಣಿಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಮಾತ್ರವಲ್ಲ ಮೈಸೂರು, ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ ರೆಸಾರ್ಟ್ ಗಳಲ್ಲಿ ಕೂಡ ಜನರು ಸೇರದಂತೆ ಹಾಗೂ ಯಾವುದೇ ಮ್ಯೂಸಿಕ್ ಪಾರ್ಟಿಗಳ ಆಯೋಜನೆ ಮಾಡದಂತೆ ನೋಡಿಕೊಳ್ಳಲು ಆಯಾ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರೊನಾ ಸೋಂಕಿನ ಜೊತೆಗೆ ರೂಪಾಂತರ ಕೊರೊನಾ ಕೂಡ ಹರಡುತ್ತಿರುವುದರಿಂದ ಇಡೀ ರಾಜ್ಯದ ಜನತೆಯ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಹೊಸ ವರ್ಷಾಚರಣೆ ಬ್ರೇಕ್ ಹಾಕುವುದು ಉತ್ತಮ. ಈ ನಿಟ್ಟಿನಲ್ಲಿ ಜನರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.