ಬೆಂಗಳೂರು: ಬಿಜೆಪಿ ಜೊತೆ ಇದ್ದರೆ ನಾನು ಇನ್ನೂ ಸಿಎಂ ಆಗಿರುತ್ತಿದ್ದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ, ಕುಮಾರಸ್ವಾಮಿ ಬಿಜೆಪಿಗೆ ಬಂದರೂ ಸಿಎಂ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಶ್ವತ್ಥ ನಾರಾಯಣ, ರೈತ ನಾಯಕ, ಬಿ.ಎಸ್. ಯಡಿಯೂರಪ್ಪನವರು ಇರುವಾಗ ಸಿಎಂ ಸ್ಥಾನವನ್ನು ಬೇರೆ ಪಕ್ಷದವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಬರಲ್ಲ. ಹಾಗಾಗಿ ಹೆಚ್.ಡಿ.ಕೆ. ಬಿಜೆಪಿಗೆ ಬಂದಿದ್ದರೂ ಸಿಎಂ ಆಗುತ್ತಿರಲಿಲ್ಲ ಎಂದರು.
ಕಾಂಗ್ರೆಸ್ ವಿರೋಧಿ ಮತಗಳೇ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಗೆಲ್ಲಲು ನೆರವಾಗಿದ್ದವು. ಅದನ್ನು ಮರೆತು ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ಮೈತ್ರಿ ಸರ್ಕಾರದಿಂದ ಕುಮಾರಸ್ವಾಮಿ ನೋವನುಭವಿಸಿದ್ದಾರೆ. ಕಾಂಗ್ರೆಸ್ ನಿಂದ ಅವರಿಗೆ ತೊಂದರೆಯಾಗಿದೆ, ಕಿರುಕುಳ ಕೊಟ್ಟು, ಯಾವ ರೀತಿ ಕಾಲೆಳೆದು ಬೀಳಿಸಿದರು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಬೇಸತ್ತಿದ್ದರು. 17 ಶಾಸಕರು ಕೂಡ ಇದೇ ಕಾರಣಕ್ಕೆ ರಾಜೀನಾಮೆ ನೀಡಿ ಬಂದಿದ್ದರು. ಹೀಗಾಗಿ ಕಾಂಗ್ರೆಸ್ ಬಗ್ಗೆ ಈಗ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.