ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಕೆಲ ಮುಖಂಡರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಇನ್ನು ಹಲವರು ಮುಷ್ಕರ ಮುಂದುವರೆಸಿದ್ದಾರೆ. ರಾಜ್ಯದ ಜನರು ಈ ದೊಂಬರಾಟವನ್ನು ಗಮನಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.
ಇಲಾಖೆಗೆ ಸಂಬಂಧಿಸದ ವ್ಯಕ್ತಿಯೊಬ್ಬ ಸ್ವಪ್ರತಿಷ್ಠೆಗಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇದರ ಹಿಂದಿನ ಕೈವಾಡದ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು, ಕಾರ್ಮಿಕರು, ಸಾರ್ವಜನಿಕರು ಪರದಾಡುತ್ತಿದ್ದಾರೆ ಆದಾಗ್ಯೂ ಪ್ರತಿಷ್ಠೆಗಾಗಿ ಮುಷ್ಕರ ನಡೆಸುತ್ತಿರುವುದು ಖಂಡನೀಯ.
ಸಾರಿಗೆ ನೌಕರರ 9 ಬೇಡಿಕೆ ಈಡೇರಿಸುವುದಾಗಿ ನಿನ್ನೆಯೇ ಸರ್ಕಾರ ಮಾಧ್ಯಮಗಳ ಮೂಲಕ ಘೋಷಿಸಿದೆ. ಸರ್ಕಾರ ಹಾಗೂ ಸಚಿವರ ಬಗ್ಗೆ ನಂಬಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಮಾಧ್ಯಮದ ಮೂಲಕವೇ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಅದನ್ನಾದರೂ ನಂಬಿ. ಸಾರಿಗೆ ಇಲಾಖೆಯ ಯೂನಿಯನ್ ಮುಖಂಡರು, ಎಸ್ ಸಿ ಎಸ್ ಟಿ ಸಂಘದ ಮುಖಂಡರು ಮುಷ್ಕರ ವಾಪಸ್ ಪಡೆದಿದ್ದಾರೆ. ಆದರೆ ಕೆಲವರಿಂದ ಮುಷ್ಕರ ಮುಂದುವರೆಯುವುದು ಸಾರಿಗೆ ನೌಕರರ ಸಂಘಗಳಲ್ಲೇ ಇರುವ ಒಡಕನ್ನು ತೋರುತ್ತದೆ. ಇದರಿಂದ ಹೋರಾಟ ತಪ್ಪು ದಾರಿ ಹಿಡಿಯುತ್ತಿದೆ ಎಂದು ಹೇಳಿದರು.