ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು, ಯತ್ನಾಳ್, ಹೆಚ್.ವಿಶ್ವನಾಥ್, ಬೆಲ್ಲದ್, ರೇಣುಕಾಚಾರ್ಯ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತೋರ್ವ ಶಾಸಕ ಸಿಎಂ ಯಡಿಯೂರಪ್ಪ ನಡೆಗೆ ಕಿಡಿಕಾರಿದ್ದಾರೆ. ಸಂಪುಟದಲ್ಲಿ ಭ್ರಷ್ಟರಿಗೆ ಮಣೆ ಹಾಕಿರುವುದು ನಿಜ ಎಂದಿದ್ದಾರೆ.
ಸಂಪುಟ ವಿಸ್ತರಣೆ ವಿಚಾರವಾಗಿ ಅಸಮಾಧಾನ ಹೊರಹಾಕಿರುವ ಶಾಸಕ ಅಪ್ಪಚ್ಚು ರಂಜನ್, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಪ್ರಾಮಾಣಿಕರಿಗೆ ಸ್ಥಾನ ನೀಡಿಲ್ಲ ಎಂದು ಗುಡುಗಿದ್ದಾರೆ.
ಸಿ.ಪಿ.ಯೋಗೇಶ್ವರ್ ವಿಚಾರದಲ್ಲಿ ವಿಶ್ವನಾಥ್ ಹೇಳಿದ್ದು ಸತ್ಯ, ಚುನಾವಣೆಗೂ ಎರಡು ದಿನ ಮುಂಚೆ ಏನಾಯಿತೆಂದು ಗೊತ್ತು. ವಿಶ್ವನಾಥ್ ಸೋಲಿಗೆ ಯೋಗೇಶ್ವರ್ ನೇರ ಕಾರಣ. 10 ದಿನದೊಳಗೆ ಕೇಂದ್ರ ನಾಯಕರನ್ನು ಭೆಟಿಯಾಗುತ್ತೇವೆ. ಎಲ್ಲಾ ವಿಷಯಗಳನ್ನು ರಾಜ್ಯ ರಾಜಕೀಯದ ಸದ್ಯದ ಬೆಳವಣಿಗೆಯನ್ನು ವಿವರಿಸುತ್ತೇವೆ. ಅನುದಾನ ಹಂಚಿಕೆಯಲ್ಲೂ ತಾರತಮ್ಯವೆಸಗಲಾಗಿದೆ ಎಂದು ಹೇಳಿದರು.