ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿದ್ದು, ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಬಿಜೆಪಿ ಹೈಕಮಾಂಡ್ ಬಳಿ ರಾಜ್ಯ ನಾಯಕರ ಲಾಬಿ ಕೂಡ ಜೋರಾಗಿದೆ. ಈ ನಡುವೆ ಎಂಎಲ್ ಸಿ ಸಿ.ಪಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ತಮ್ಮ ಆಪ್ತನಿಗೆ ಸಚಿವ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಲವು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಮತ್ತೆ ಭೇಟಿಯಾಗಿದ್ದಾರೆ. ಈ ವೇಳೆ ಸಿ.ಪಿ.ಯೋಗೀಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಬಿ.ಎಲ್. ಸಂತೋಷ್ ಭೇಟಿ ಬಳಿಕ ಮಾತನಾಡಿದ ಸಚಿವ ಜಾರಕಿಹೊಳಿ, ಸಿ.ಪಿ.ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಯಾಗಿದೆ. ನಮ್ಮ ಜೊತೆ ಬಿಜೆಪಿಗೆ ಬಂದವರಲ್ಲಿ ಮಹೇಶ್ ಕುಮಟಳ್ಳಿ ಕೂಡ ಒಬ್ಬರು. ಆದರೆ ಕೆಲ ಕಾರಣಗಳಿಂದ ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗದೇ ಇರಬಹುದು ಎಂದು ಹೇಳಿದ್ದಾರೆ.
ಈ ನಡುವೆ ಡಿಸಿಎಂ ಅಶ್ವತ್ಥನಾರಾಯಣ ಕೂಡ ಸಿ.ಪಿ.ಯೋಗೀಶ್ವರ್ ಪರ ಬ್ಯಾಟ್ ಬೀಸಿದ್ದು, ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಯೋಗೀಶ್ವರ್ ಗೂ ಸಚಿವ ಸ್ಥಾನ ಸಿಗಬೇಕು ಎಂದಿದ್ದಾರೆ. ಒಟ್ಟಾರೆ ಸಿ.ಪಿ.ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.