ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರೆ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ವಿಧಾನಸಭೆ ಕಲಾಪ ಬೆಳಿಗ್ಗೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸಿಡಿ ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡು ಬಾರಿ ಕಲಾಪ ಮುಂದೂಡಿದರು. ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗಲೂ ಕಾಂಗ್ರೆಸ್ ಸದಸ್ಯರು ಸಿಡಿ ಪ್ರಕರಣವನ್ನು ಹೈಕೋರ್ಟ್ ಮುಖ್ಯನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಗದ್ದಲ ಆರಂಭಿಸಿದರು. ಅಲ್ಲದೇ ಕೋರ್ಟ್ ಮೊರೆ ಹೋದ 6 ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ವಾಗ್ವಾದ ಗದ್ದಲ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಸದಸ್ಯರು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಸಭಾತ್ಯಾಗ ಮಾಡಿದರು.
ಒಟ್ಟೆ ಒಗೆದು, ಪಾತ್ರೆ ತೊಳೆದುಕೊಟ್ಟು ಮತಯಾಚನೆ ಮಾಡಿದ ಅಭ್ಯರ್ಥಿ
ಒಂದೆಡೆ ಕಾಂಗ್ರೆಸ್ ಸದಸ್ಯರ ಗದ್ದಲ-ಕೋಲಾಹಲ, ಇನ್ನೊಂದೆಡೆ ಜೆಡಿಎಸ್ ಸಭಾತ್ಯಾಗ ನಡುವೆಯೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪೂರಕ ವಿಧೇಯಕ ಮಂಡನೆ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಸದಸ್ಯರು ಸಿಡಿ ಪ್ರಕರಣ ವಿಚಾರವಾಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದರು. ಗದ್ದಲ ಹೆಚ್ಚುತ್ತಿದ್ದಂತೆ ಸ್ಪೀಕರ್ ಕಾಗೇರಿ ಕಲಾಪವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.