ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದಾಳೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಪರ ವಕೀಲ ಜಗದೀಶ್, ಸಿಡಿ ಯುವತಿ ಬೆಂಗಳೂರಿನಲ್ಲಿಯೇ ಇದ್ದಾಳೆ. ಮಧ್ಯಾಹ್ನ 12:30ರಿಂದ 1 ಗಂಟೆಯೊಳಗೆ ಕೋರ್ಟ್ ಗೆ ಹಾಜರಾಗಬಹುದು. ಆದರೆ ಕೋರ್ಟ್ ಬಂದು ಹೇಳಿಕೆ ನೀಡಿದ ಬಳಿಕ ಆಕೆಯನ್ನು ಎಸ್ ಐ ಟಿ ವಶಕ್ಕೆ ನೀಡಬಾರದು ಎಂದು ಮತ್ತೊಂದು ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು.
ರಾಜಕೀಯದಲ್ಲಿ ಹೂವಿನ ಹಾರ, ಜೈಕಾರ, ಕಲ್ಲೆಸೆತ, ಮೊಟ್ಟೆ ಎಸೆತ ಎಲ್ಲವೂ ಇರುತ್ತದೆ ಎಂದ ಡಿ.ಕೆ.ಶಿವಕುಮಾರ್
ಕೋರ್ಟ್ ಏನು ಆದೇಶ ನೀಡುತ್ತೋ ಅದನ್ನು ನಾವು ಪಾಲಿಸುತ್ತೇವೆ. ತನಿಖಾಧಿಕಾರಿ ಬಂದಾಗ ಯುವತಿ ಹಾಜರು ಪಡಿಸುತ್ತೇವೆ. ಕೋರ್ಟ್ ಸೂಚಿಸಿದ ಕಡೆ ಯುವತಿ ಹಾಜರು ಪಡಿಸಲು ಸಿದ್ಧರಿದ್ದೇವೆ. ಯುವತಿ ತನಿಖೆಗೆ ಸಹಕರಿಸುತ್ತಾಳೆ. ವಿಚಾರಣೆಗೂ ಹಾಜರಾಗುತ್ತಾಳೆ. ಆದರೆ ಆಕೆಯನ್ನು ಎಸ್ ಐ ಟಿ ವಶಕ್ಕೆ ನೀಡಬಾರದು. ಆರೋಪಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಯುವತಿಯನ್ನು ಎಸ್ ಐ ಟಿ ವಶಕ್ಕೆ ನೀಡಿದರೆ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.