ಬೆಂಗಳೂರು: ನಾಳೆ 7-8 ನೂತನ ಸಚಿವರ ಪದಗ್ರಹಣ ಬೆನ್ನಲ್ಲೇ ಅಬಕಾರಿ ಸಚಿವ ಹೆಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವ ಮಾತು ಕೇಳಿಬರುತ್ತಿದ್ದು, ಹೆಚ್.ನಾಗೇಶ್ ಬೆಂಬಲಿಗರು ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ನಿವಾಸದ ಎದುರು ಸೇರಿರುವ ಕೋಲಾರ ಭಾಗದ ಹೆಚ್.ನಾಗೇಶ್ ಬೆಂಬಲಿಗರು, ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ವಚನ ಭ್ರಷ್ಟ ಸಿಎಂ ಎಂದು ಪಟ್ಟ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಳೆ 7-8 ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದರ ಬೆನ್ನಲ್ಲೇ ಅಬಕಾರಿ ಸಚಿವ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹೆಚ್.ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿ ಸರ್ಕಾರ ರಚನೆಗೆ ನಾಗೇಶ್ ಪ್ರಮುಖ ಕಾರಣರು. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರೂ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 17 ಶಾಸಕರು ರಾಜೀನಾಮೆ ನೀಡಿದ್ದರು. ಅಂದೇ ಯಡಿಯೂರಪ್ಪನವರು ಹೆಚ್.ನಾಗೇಶ್ ಅವರಿಗೆ 3 ವರ್ಷ ಸಚಿವನಾಗಿರುತ್ತೀಯಾ ಎಂದು ಭರವಸೆ ನೀಡಿದ್ದರು. ಈಗ ಏಕಾಏಕಿ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟರೆ ಕೋಲಾರದಲ್ಲಿ ಇನ್ನು ಮುಂದೆ ಬಿಜೆಪಿ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.