ಬೆಂಗಳೂರು: ರಾಜ್ಯದಲ್ಲಿ ಲಸಿಕೆ ನೀಡಿಕೆ ಬಗ್ಗೆ ಸರ್ಕಾರದಲ್ಲೇ ಗೊಂದಲ ಆರಂಭವಾಗಿದೆ. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಎಂದು ಸಿಎಂ ಹೇಳಿದರೆ, ಆರೋಗ್ಯ ಸಚಿವ ಸುಧಾಕರ್ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಿಲ್ಲ, ಕೇಂದ್ರ ಸರ್ಕಾರ ನಿಡುತ್ತಿರುವ ಲಸಿಕೆ 45 ವರ್ಷ ಮೇಲ್ಪಟ್ಟವರಿಗೆ ಹೊರತು ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಬಳಸುವಂತಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಸಿಎಂ ಹಾಗೂ ಸಚಿವರಲ್ಲೇ ಗೊಂದಲ ಆರಂಭವಾಗಿದೆ.
ಅಲ್ಲದೇ ಒಂದೆಡೆ ಸಿಎಂ ಲಸಿಕೆ ಸಂಗ್ರಹವಿದೆ ಎಂದು ಹೇಳಿದರೆ ಇನ್ನೊಂದೆಡೆ ಸಚಿವ ಸುಧಾಕರ್ ಲಸಿಕೆ ಪೂರೈಕೆಯಾಗಿಲ್ಲ ಹಾಗಾಗಿ ಲಸಿಕೆ ಬಂದ ಬಳಿಕ ವ್ಯಾಕ್ಸಿನ್ ನೀಡುವುದಾಗಿ ತಿಳಿಸಿದ್ದಾರೆ. ಸಿಎಂ ಹಾಗೂ ಸಚಿವರ ಒಂದೊಂದು ರೀತಿಯ ಹೇಳಿಕೆಯಿಂದಾಗಿ ಸಾರ್ವಜನಿಕರಿಗೂ ಗೊಂದಲ ಉಂಟಾಗುತ್ತಿದ್ದು, ಸರ್ಕಾರದ ಈ ನಡೆಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 5-6 ಪಟ್ಟು ಕೊರೊನಾ ಹೆಚ್ಚಳ; ಖಾಸಗಿ ಆಸ್ಪತ್ರೆಗಳಿಗೆ ಬೆಡ್ ನೀಡಿ ಸಹಕರಿಸಿ ಎಂದು ಸಿಎಂ ಮನವಿ
ಸಿಎಂ ಹಾಗೂ ಆರೋಗ್ಯ ಸಚಿವರ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಒಂದು ಕಡೆ ಲಸಿಕೆ ದಾಸ್ತಾನು ಇಲ್ಲ ಎಂದು ಸಚಿವ ಸುಧಾಕರ್ ಹೇಳುತ್ತಾರೆ. ಮತ್ತೊಂದು ಕಡೆ ಲಸಿಕೆ ಬೇಕಾದಷ್ಟಿದೆ ಎಂದು ಸಿಎಂ ಹೇಳುತ್ತಾರೆ. ಹೀಗೆ ತಲೆಗೊಂದು ಹೇಳಿಕೆ, ತಲೆಗೊಂದು ಅಭಿಪ್ರಾಯ ಕೊಡುತ್ತಾ ಈ ಸರ್ಕಾರ ಜನರನ್ನು ಗೊಂದಲದಲ್ಲಿ ಮುಳುಗಿಸಿದೆ. ಹಾಗಾದರೆ ಇಲ್ಲಿ ಸುಳ್ಳು ಹೇಳುತ್ತಿರುವುದು ಯಾರು..? ಮುಖ್ಯಮಂತ್ರಿಗಳೋ.? ಆರೋಗ್ಯ ಸಚಿವರೋ ? ಎಂದು ಪ್ರಶ್ನಿಸಿದ್ದಾರೆ.