ಬೆಂಗಳೂರು: ಸಂಕ್ರಮಣಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತವಾಗಿದ್ದು, 7 ಸಚಿವರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡುವ ಮಾತು ಕೇಳಿಬರುತ್ತಿದ್ದು, ಇವರಲ್ಲಿ ಅಬಕಾರಿ ಸಚಿವ ಹೆಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎನ್ನಲಾಗುತ್ತಿದೆ.
ತಮ್ಮನ್ನು ಸಂಪುಟದಿಂದ ಕೈ ಬಿಡುವ ಮಾತು ಕೇಳಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೆಚ್.ನಾಗೇಶ್, ನನ್ನನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಇನ್ನೂ ಎರಡುವರೆ ವರ್ಷ ಸಚಿವನಾಗಿ ನಾನು ಮುಂದುವರೆಯುವ ಬಗ್ಗೆ ಸಿಎಂ ಯಡಿಯೂರಪ್ಪ ಈ ಹಿಂದೆಯೇ ನನಗೆ ಮಾತು ಕೊಟ್ಟಿದ್ದಾರೆ. ಆದರೆ ಈಗ ನನ್ನನ್ನು ಕೈಬಿಡುವ ಮಾತು ಕೇಳಿ ನನಗೆ ಶಾಕ್ ಆಗುತ್ತಿದೆ ಎಂದಿದ್ದಾರೆ.
ನಾನು ಸಮ್ಮಿಶ್ರ ಸರ್ಕಾರದಲ್ಲಿಯೂ ಸಚಿವನಾಗಿದ್ದೆ. ಅಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ನಾನು ಮೊದಲಿಗ. ಬಿಜೆಪಿ ಸರ್ಕಾರ ರಚನೆ ಹಾದಿ ಸುಗಮವಾಗುವಲ್ಲಿ ನನ್ನ ಪಾತ್ರ ಮಹತ್ವದ್ದಾಗಿದೆ. ಹೀಗಿರುವಾಗ ನನ್ನನ್ನು ಸಂಪುಟದಿಂದ ಕೈಬಿಡಲು ಸಾಧ್ಯವಿಲ್ಲ. ನನಗೆ ಸಿಎಂ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.