ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆಯನ್ನೇ ಇಳಿಕೆ ಮಾಡಲಾಗಿದೆ. ಸರ್ಕಾರದ ಈ ನಡೆಯಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಇದೀಗ ಸರ್ಕಾರ ಕೋವಿಡ್ ಟೆಸ್ಟ್ ಸಂಖ್ಯೆಯನ್ನೇ ಇಳಿಕೆ ಮಾಡಿದೆ. ಟೆಸ್ಟ್ ಕಡಿಮೆ ಮಾಡಿದರೆ ಸೋಂಕಿತರ ಪತ್ತೆ ಸಂಖ್ಯೆ ಕಡಿಮೆಯಾಗುತ್ತದೆ. ಆಕ್ಸಿಜನ್ ಬೆಡ್, ಐಸಿಯು ಬೆಡ್ ಗಳ ಸಮಸ್ಯೆ ಎದುರಾಗಲ್ಲ. ಒಂದು ವೇಳೆ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಿದರೆ ಸೋಂಕಿತರ ಪತ್ತೆ ಸಂಖ್ಯೆ ಹೆಚ್ಚುವುದರಿಂದ ಆಕ್ಸಿಜನ್, ಐಸಿಯು ಸಮಸ್ಯೆ ಹೆಚ್ಚಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ ಎನ್ನಲಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ರೂ ಭಾರತವೇ ಸುರಕ್ಷಿತ ; ಇಲ್ಲಿದೆ ಜನತೆಗೆ ನೆಮ್ಮದಿ ನೀಡುವ ಮಾಹಿತಿ
ಸರ್ಕಾರದ ಈ ನಡೆಗೆ ಆತಂಕ ವ್ಯಕ್ತಪಡಿಸಿರುವ ತಜ್ಞರು, ಈ ರೀತಿ ಮಾಡುವುದರಿಂದ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದಿಲ್ಲ. ಬದಲಾಗಿ ಸಮುದಾಯಗಳ ಮಟ್ಟದಲ್ಲಿ ಸೋಂಕು ಹರಡುತ್ತದೆ. ಇದರಿಂದ ಕೊರೊನಾ 3ನೇ ಅಲೆಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಮೊದಲು ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಿ ಸೋಂಕಿತರನ್ನು ಪತ್ತೆ ಮಾಡಿ ಅವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಸೂಚಿಸಿದೆ.