ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿರುವುದರಿಂದ ಕಳೆದ ಎರಡೂವರೆ ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಈಗ ದೇಶದಲ್ಲಿ ಐದನೇ ಹಂತದ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಇದರ ಜೊತೆಗೆ ಬಹಳಷ್ಟು ಸಡಿಲಿಕೆಗಳನ್ನು ಮಾಡಲಾಗಿದೆ.
ಅಲ್ಲದೆ ಮುಂದೂಡಿಕೆಯಾಗಿದ್ದ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಲಾಗಿದ್ದು, ಶಾಲೆಗಳನ್ನು ಆರಂಭಿಸುವ ಕುರಿತಂತೆ ಪೋಷಕರ ಜೊತೆ ಸಮಾಲೋಚನೆ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಜೂನ್ 8ರ ಸೋಮವಾರದಿಂದ ಶಾಲೆಗಳನ್ನು ತೆರೆದು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಾಗಲು ತಿಳಿಸಿದೆ.
ಪೋಷಕರಿಂದ ಶಾಲೆ ಆರಂಭದ ಕುರಿತು ಮಾಹಿತಿ ಸಂಗ್ರಹಣೆಗೆ ಸರ್ಕಾರ ಮುಂದಾಗಿದ್ದು, ಇದರ ಮಧ್ಯೆ ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಅಥವಾ ಲಸಿಕೆ ಲಭ್ಯವಾಗುವವರೆಗೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸದಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗತೊಡಗಿದೆ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆಗಳನ್ನು ಆರಂಭಿಸುವ ಕುರಿತಂತೆ ಸರ್ಕಾರ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಪೋಷಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರ ಅಭಿಪ್ರಾಯಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಆ ಬಳಿಕವೇ ಕೇಂದ್ರ ಸರ್ಕಾರದ ಸೂಚನೆಯನ್ವಯ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.