ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ಫೋಟದ ವೇಳೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದ್ದ ವ್ಯಕ್ತಿ ಬದುಕಿದ್ದಾನೆ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಹುಣಸೋಡಿನಲ್ಲಿ ಬುಲೆರೋ ವಾಹನ ಸಮೇತ ಸ್ಫೋಟಕ ವಸ್ತು ಬ್ಲಾಸ್ಟ್ ಆಗಿತ್ತು. ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದರು. ಇವರಲ್ಲಿ ಸ್ಫೋಟಕ ವಸ್ತು ತುಂಬಿದ್ದ ಬುಲೆರೋ ಚಾಲಕ ಶಶಿ ಕೂಡ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು. ಆದರೆ ಆತ ತಾನು ಬದುಕಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಶಶಿ ತಂದೆ ಬೋರೇಗೌಡ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತನ್ನ ಮಗ ಬದುಕಿದ್ದಾನೆ ಎಂದು ತಿಳಿಸಿದ್ದಾರೆ.
ಶಶಿ ಸ್ಫೋಟಕ ತುಂಬಿದ್ದ ಬುಲೆರೋ ವಾಹನ ತೆಗೆದುಕೊಂಡು ಹೋಗಿ, ಸ್ಫೋಟಕಗಳನ್ನು ಬೇರೊಂದು ವಾಹನಕ್ಕೆ ಡಂಪ್ ಮಾಡಿದ್ದ. ಮತ್ತೊಂದು ವಾಹನದಲ್ಲಿ ಪ್ರವೀಣ್ ಹಾಗೂ ಮಂಜುನಾಥ್ ಎಂಬುವವರು ಸ್ಫೋಟಕ ಕೊಂಡೊಯ್ದಿದ್ದರು ಈ ವೇಳೆ ವಾಹನ ಸ್ಫೋಟಗೊಂಡಿತ್ತು. ಒಟ್ಟಾರೆ ಶಿವಮೊಗ್ಗ ಸ್ಫೋಟ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಶಶಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ತನ್ನ ತಂದೆಗೆ ಕರೆ ಮಾಡಿ ತಾನು ಬದುಕಿರುವುದಾಗಿ ತಿಳಿಸಿರುವ ಶಶಿ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಶಶಿ ಪೊಲೀಸರ ಬಲೆಗೆ ಬಿದ್ದರೆ ಸ್ಫೋಟಕ ರಹಸ್ಯ ಬಯಲಾಗಲಿದ್ದು, ದೊಡ್ಡ ದೊಡ್ಡವರ ಹೆಸರು ಕೂಡ ಹೊರಬರುವ ಸಾಧ್ಯತೆ ಇದೆ.