ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಅಕ್ಟೋಬರ್ 15ರಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಬಹುದು ಎಂದು ತಿಳಿಸಿದೆ.
ಆದರೆ ಶಾಲೆಗಳನ್ನು ಆರಂಭಿಸಲು ಪೋಷಕರ ಅನುಮತಿ ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಇದರ ಮಧ್ಯೆ ಬಿಸಿಯೂಟ ತಯಾರಿಕರಿಗೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ಬಿಸಿಯೂಟ ತಯಾರಕರು ತಮಗೆ ಕೊರೊನಾ ಸೋಂಕು ಅಥವಾ ರೋಗ ಲಕ್ಷಣಗಳಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದ್ದು, ಜೊತೆಗೆ ಮನೆಯಲ್ಲಿ ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ಈ ಕುರಿತು ಮಾಹಿತಿ ನೀಡುವುದು ಅವಶ್ಯಕವಾಗಿದೆ.
ಅಡುಗೆ ತಯಾರಿಗೆ ಶುದ್ಧಗೊಳಿಸಿದ ಪಾತ್ರೆಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದ್ದು, ಅಡುಗೆ ತಯಾರಕರು ವಾಚ್, ಉಂಗುರ, ಬಳೆ ಸೇರಿದಂತೆ ಯಾವುದೇ ಆಭರಣ ಧರಿಸಬಾರದು. ಉಗುರಿಗೆ ಬಣ್ಣ ಹಚ್ಚಬಾರದು ಎಂದು ತಿಳಿಸಲಾಗಿದೆ.
ಅಡುಗೆ ತಯಾರಿಸುವ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಲ್ಲದೆ ಉಗುಳುವುದು, ಸೀನುವುದನ್ನು ನಿಷೇಧಿಸಲಾಗಿದೆ. ಅಡುಗೆಗೆ ಬಳಸುವ ತರಕಾರಿಗಳನ್ನು ಉಪ್ಪು ಮತ್ತು ಅರಿಶಿಣ ಅಥವಾ 50 ಪಿಪಿಎಂ ಕ್ಲೋರಿನ್ ಮತ್ತು ಶುದ್ಧ ನೀರಿನ ಸಂಯೋಜನೆಯಿಂದ ತೊಳೆದುಕೊಳ್ಳಲು ಸೂಚಿಸಲಾಗಿದೆ.
ಬಿಸಿ ಊಟ ಬಡಿಸುವ ವೇಳೆ ಮಕ್ಕಳ ದೈಹಿಕ ಅಂತರ ಕಾಪಾಡಿಕೊಳ್ಳಲು ಕ್ರಮ ವಹಿಸಬೇಕು ಹಾಗೂ ವಿದ್ಯಾರ್ಥಿಗಳ ಗುಂಪುಗೂಡುವಿಕೆಯನ್ನು ತಪ್ಪಿಸಬೇಕು ಎಂದು ತಿಳಿಸಲಾಗಿದೆ.