ಬೆಂಗಳೂರು: ಶಾದಿ ಡಾಟ್ ಕಾಮ್ ಸೇರಿದಂತೆ ಮ್ಯಾಟ್ರಿ ಮೋನಿ ವೆಬ್ ಸೈಟ್ ಗಳಲ್ಲಿ ಪ್ರೊಫೈಲ್ ಅಪ್ ಡೇಟ್ ಮಾಡುವ ಮೊದಲು ಒಮ್ಮೆ ಈ ಸ್ಟೋರಿ ಓದಲೇಬೇಕು. ಮ್ಯಾಟ್ರಿ ಮೋನಿಯಲ್ಲಿ ಯುವಕರ ಪ್ರೊಫೈಲ್ ನೋಡಿ ಇಂದು ಮೋಸ ಹೋಗುತ್ತಿರುವವರೇ ಹೆಚ್ಚು.
ಶಾದಿ ಡಾಟ್ ಕಾಮ್ ನಲ್ಲಿ ಪರಿಚಯನಾದ ವ್ಯಕ್ತಿಯೊಬ್ಬ ಮಹಿಳೆಗೆ 70 ಲಕ್ಷ ರೂ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿವೋರ್ಸ್ ಆದ ಮಹಿಳೆಯೊಬ್ಬರು ತಮ್ಮ ಪ್ರೊಫೈಲ್ ನ್ನು ಶಾದಿ ಡಾಟ್ ಕಾಂ ನಲ್ಲಿ ಅಪ್ ಲೋಡ್ ಮಾಡಿದ್ದರು. ಇದನ್ನು ನೋಡಿದ ಕಾರ್ತಿಕ್ ಎಂಬ ವ್ಯಕ್ತಿ ಅದೇ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು, ಮಹಿಳೆಗೆ ತನಗೂ ಡಿವೋರ್ಸ್ ಆಗಿದೆ ಎಂದು ಹೇಳಿ ನಂಬಿಸಿದ್ದಾನೆ.
ಇಬ್ಬರ ನಡುವೆ ಪರಿಚಯ, ಸ್ನೇಹವಾಗಿ ಮದುವೆಯ ಬಗ್ಗೆಯೂ ನಿರ್ಧರಿಸಿದ್ದಾರೆ. ಈ ನಡುವೆ ವ್ಯಕ್ತಿ ತಾವು ಮದುವೆಯಾದ ಬಳಿಕ ಇರಲು ಫ್ಲಾಟ್ ನ್ನು ಖರಿದಿಸಲು ಹಣ ಬೇಕೆಂದು ಮಹಿಳೆ ಹಾಗೂ ಆಕೆಯ ಮನೆಯವರಿಂದ 70 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ. ಆಗಸ್ಟ್ ನಲ್ಲಿ ಮದುವೆಗೂ ದಿನಾಂಕ ನಿಗದಿ ಮಾಡಿದ್ದರು. ಆದರೆ ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ವರ ಮಹಾಶಯನ ಅಸಲಿ ಮುಖ ಅನಾವರಣವಾಗತೊಡಗಿದೆ.
ಮದುವೆ ದಿನ ಸಮೀಪಿಸುತ್ತಿದ್ದಂತೆಯೇ ಮಹಿಳೆಗೆ ನಿನ್ನ ನಡತೆ ಸರಿಯಿಲ್ಲ ಎಂದು ಆರೋಪಿಸಲು ಶುರು ಮಾಡಿದ್ದಾನೆ. ಇದೇ ವೇಳೆ ಆತ ವಿಚ್ಛೇದನವನ್ನೇ ಪಡೆದಿಲ್ಲ ಎಂಬುದೂ ಸಂತ್ರಸ್ತೆಗೆ ಗೊತ್ತಾಗಿದೆ. ಕಾರ್ತಿಕ್, ಶಾದಿ ಡಾಟ್ ಕಾಮ್ ಮೂಲಕ ಹಲವು ಮಹಿಳೆಯರಿಗೆ, ಯುವತಿಯರಿಗೆ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ವಿವಾಹ ನಿರ್ಧಾರದಿಂದ ಹಿಂದೆ ಸರಿದಿರುವ ಸಂತ್ರಸ್ತೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.