ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದ್ದು, ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಸದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮಿಂದ ವ್ಯಾಕ್ಸಿನ್ ನೀಡಲು ಸಾಧ್ಯವೇ ಇಲ್ಲ ಎಂದಾದರೆ ಹೇಳಿ ನಾವು ಸರ್ಕಾರದಿಂದ ವ್ಯಾಕ್ಸಿನ್ ಒದಗಿಸಲಾಗದು ಎಂದೇ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದೆ.
ಕೊರೊನಾ ಸೋಂಕಿನಿಂದ ಜನರು ಸಾವನ್ನಪ್ಪುತ್ತಿದ್ದಾರೆ. ವ್ಯಾಕ್ಸಿನ್ ಘೋಷಣೆ ಮಾಡಿ ಇದೀಗ ಲಸಿಕೆ ನೀಡದೇ ಜನರು ಪರದಾಡುವಂತೆ ಮಾಡಲಾಗಿದೆ. ರಾಜ್ಯದಲ್ಲಿ 6 ಕೋಟಿಗೂ ಹೆಚ್ಚು ಜನರಿದ್ದಾರೆ. ಈವರೆಗೆ ಒಂದು ಪರ್ಸಂಟ್ ನಷ್ಟು ಜನರಿಗೂ ಲಸಿಕೆಯನ್ನು ನೀಡಿಲ್ಲ. ಇಂದೆಂಥ ವ್ಯಾಕ್ಸಿನ್ ಅಭಿಯಾನ ಎಂದು ಕೋರ್ಟ್ ಕಿಡಿಕಾರಿದೆ.
ಕುತೂಹಲ ಮೂಡಿಸಿದ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ
ಮೊದಲ ಡೋಸ್ ಲಸಿಕೆ ತೆಗೆದುಕೊಂಡವರಿಗೆ 2ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ಪಡೆಯುವುದು ಜನರ ಹಕ್ಕಲ್ಲವೇ? 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಈ ಗ್ಯಾಪ್ ನ್ನು ಹೇಗೆ ಸರಿಪಡಿಸುತ್ತೀರಿ? ಇದೇ ರೀತಿ ಮುಂದುವರೆದರೆ 2 ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡುವಂತೆ ಆದೇಶ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಇದೇ ವೇಳೆ ಹೈಕೋರ್ಟ್ ಗೆ ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ ಉತ್ತರ ನೀಡಿದ್ದು, ವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರಗಳ ಕಾಲಾವಕಾಶವಿದೆ. ವ್ಯಾಕ್ಸಿನ್ ವಿಳಂಬವಾದರೆ 1ನೇ ಡೋಸ್ ವ್ಯರ್ಥವಾಗಲ್ಲ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ ಎಂದು ವಿವರಿಸಿದ್ದಾರೆ.