ಮೈಸೂರು: ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದೆ.
ಉದ್ಯಮಿ ಉಮಾಶಂಕರ್ (45) ಮೃತ ದುರ್ದೈವಿ. ಉಮಾಶಂಕರ್ ಪತ್ನಿ ಕವಿತಾ ಜೊತೆ ಲಾಡ್ಜ್ ಗೆ ಬಂದಿದ್ದರು. ಆದರೆ ಇದೀಗ ಉಮಾಶಂಕರ್ ಮೃತದೇಹ ಲಾಡ್ಜ್ ನಲ್ಲಿ ಪತ್ತೆಯಾಗಿದ್ದು, ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ.
ಲಾಡ್ಜ್ ನ ರೂಮಿನಲ್ಲಿ ಇನ್ಸುಲಿನ್ ಬಾಟಲ್ ಹಾಗೂ ಪತ್ರವೊಂದು ಪತ್ತೆಯಾಗಿದೆ. ಪತ್ರದಲ್ಲಿ ಬಹಳ ಸಾಲ ಮಾಡಿಕೊಂಡಿದ್ದಾಗಿ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉದ್ಯಮಿ ಉಮಾಶಂಕರ್ ಹಾಗೂ ಪತ್ನಿ ಬರೆದು ಸಹಿ ಹಾಕಿದ್ದಾರೆ. ಅತಿಯಾಗಿ ಇನ್ಸುಲಿನ್ ನಿಂದ ಉಮಾಶಂಕರ್ ಸಾವನ್ನಪ್ಪಿರುವ ಶಂಕೆಯೂ ವ್ಯಕ್ತವಾಗಿದೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಪತ್ನಿ ಕವಿತಾಗಾಗಿ ಹುಡುಕಾಟ ನಡೆಸಲಾಗುತ್ತಿದೆ.