ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಕ್ಕೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಇಡೀ ಕರ್ನಾಟಕ ಬಹುತೇಕವಾಗಿ ಲಾಕ್ ಡೌನ್ ಮಾದರಿಯಲ್ಲಿ ಬಂದ್ ಆಗಿದೆ.
ನಿನ್ನೆ ರಾತ್ರಿ 9ಗಂಟೆಯಿಂದ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಇರಲಿದೆ. ಆದರೆ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅವಕಾಶ ನೀಡಿದ್ದರಿಂದ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ಮುಗಿಬಿದ್ದು, ಖರೀದಿಯಲ್ಲಿ ತೊಡಗಿದ್ದು, ಹಲವೆಡೆ ಕಂಡುಬಂದಿದೆ.
ರಾಜ್ಯದಲ್ಲಿ ಕೈಮೀರಿದ ಕೊರೊನಾ – ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಅಂದ್ರು ಸಿಎಂ ಯಡಿಯೂರಪ್ಪ
ಇದರ ಬೆನ್ನಲ್ಲೇ ಬೆಳಿಗ್ಗೆ 10 ಗಂಟೆಗೂ ಮೊದಲೇ ಪೊಲೀಸರು ಅಗತ್ಯ ವಸ್ತುಗಳ ಖರೀದಿಗೂ ಬ್ರೇಕ್ ಹಾಕಿದ್ದು, ಅಂಗಡಿಗಳ ಬಾಗಿಲು ಮುಚ್ಚಿಸಿ, ಜನರನ್ನು ವಾಪಸ್ ಕಳುಹಿಸಿದ್ದಾರೆ.
10 ಗಂಟೆಯಾಗುತ್ತಿದ್ದಂತೆ ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸಂಪೂರ್ಣ ಅಘೋಷಿತ ಲಾಕ್ ಡೌನ್ ನಿರ್ಮಾಣವಾಗಿದೆ. ಯಾರೊಬ್ಬರೂ ಕೂಡ ರಸ್ತೆಗಳಿಗೆ ಇಳಿಯುವಂತಿಲ್ಲ. ರೋಡಿಗಿಳಿದರೆ ಲಾಠಿ ಚಾರ್ಜ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ರಸ್ತೆಗಳು, ಬಸ್ ನಿಲ್ದಾಣಗಳು, ಹೋಟೆಲ್ ಗಳು, ಮಾರ್ಕೆಟ್ ಕೂಡ ಬಂದ್ ಆಗಿದ್ದು ಬಿಎಂಟಿಸಿ, ಕೆ ಎಸ್ ಆರ್ ಟಿ ಸಿ, ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.