ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ನಿಗದಿ ಮಾಡಿದ್ದ ಬೆಳಿಗ್ಗೆ 6ರಿಂದ 10 ಗಂಟೆವರೆಗಿನ ಸಮಯ ಮುಗಿಯುತ್ತಿದ್ದಂತೆ ಫೀಲ್ಡಿಗಿಳಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದ ಜನರಿಗೆ ಲಾಠಿ ಬಿಸಿ ಮುಟ್ಟಿಸಿದ್ದಾರೆ.
ಇಂದಿನಿಂದ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಪೊಲೀಸರು ಮನೆಯಿಂದ ಹೊರಬಂದವರ ಮೇಲೆ ಲಾಠಿ ಬೀಸಿ, ವಾಹನಗಳನ್ನು ಸೀಜ್ ಮಾಡಿ ಕ್ರಮ ಕೈಗೊಂಡಿದ್ದಾರೆ.
ಅಗತ್ಯ ವಸ್ತು ಖರೀದಿ ಅವಧಿ ಮುಗಿದರೂ ಕಲಬುರ್ಗಿಯ ಸೂಪರ್ ಮಾರ್ಕೆಟ್ ಏರಿಯಾದಲ್ಲಿ ಕದ್ದುಮುಚ್ಚಿ ಓಡಾಡುತ್ತಿದ್ದ ಹಲವರನ್ನು ಹಿಡಿದ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕರು, ಹಿರಿಯರು ಎಂಬುದನ್ನೂ ನೋಡದೇ ಮನಸೋ ಇಚ್ಛೆ ಲಾಠಿ ರುಚಿ ತೋರಿಸಿದ್ದಾರೆ.
ಆನ್ಲೈನ್ ಮೀಟಿಂಗ್ ವೇಳೆ ಕೌನ್ಸಿಲರ್ ನಿಂದ ಬೈಗುಳದ ಸುರಿಮಳೆ
ಹಾವೇರಿಯಲ್ಲಿ ಬೆಳಿಗ್ಗೆ 10 ಗಂಟೆ ಬಳಿಕವೂ ಮಾರ್ಕೆಟ್ ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಗದಗದ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿರುವ ಖಾಕಿ ಪಡೆ, ಹಲವು ಕಾರು, ದ್ವಿಚಕ್ರವಾಹನಗಳನ್ನು ಸೀಜ್ ಮಾಡಿದೆ.
ಇನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಾರಿನಲ್ಲಿ ಕುಟುಂಬ ಸಮೇತನಾಗಿ ಊರಿಗೆ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸರು, ರಸ್ತೆಯಲ್ಲಿಯೇ ಕಪಾಳಮೋಕ್ಷ ಮಾಡಿ, ಲಾಠಿ ಏಟು ಕೊಟ್ಟಿದ್ದಾರೆ. ಒಟ್ಟಾರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮ ಮೊದಲದಿನ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.