ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೂ ಡ್ರಗ್ಸ್ ಮಾರಾಟ ದಂಧೆ ಎಗ್ಗಿಲ್ಲದೇ ಸಾಗಿದೆ. ಡ್ರಗ್ಸ್ ದಂಧೆಕೋರರ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ಇದೀಗ 6 ಆರೋಪಿಗಳನ್ನು ಬಂಧಿಸಿದ್ದಾರೆ.
ಆದಿತ್ಯ, ಅಖಿಲ್, ಜಾನ್ ಚುಕ್ವಾಕ, ಶರ್ವಿಣ್ ಸುಪ್ರಿತ್ ಜಾನ್, ಅನಿಕೇತ್ ಹಾಗೂ ಡಾನ್ ಮೈಕ್ ಪಾಲ್ ಬಂಧಿತ ಆರೋಪಿಗಳು. ಡಾರ್ಕ್ ವೆಬ್, ಟ್ರಿಡ್ ವೆಬ್ ಗಳಲ್ಲಿ ಮಾಹಿತಿ ಪಡೆದು ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಕಾಡುಗೋಡಿ ವ್ಯಾಪ್ತಿಯ ಕನ್ನಮಂಗಲದ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ.
ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಡ್ರಗ್ಸ್ ಖರೀದಿಸಿ ಕೊರಿಯರ್ ನಲ್ಲಿ ತರಿಸಿಕೊಳ್ಳುತ್ತಿದ್ದರು. ಬಳಿಕ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳಿಂದ 35 ಲಕ್ಷ ರೂ. ಮೌಲ್ಯದ ಎನ್ಡಿಎಂಎ ಮಾತ್ರೆ, ಗಾಂಜಾ, ಎಲ್ಎಸ್ಡಿ ಸ್ಟಿಪ್ಸ್, ಮೊಬೈಲ್ ಫೋನ್ ಗಳು, 1 ಕಾರು, ಬೈಕ್ ಹಾಗೂ 5,000 ನಗದು ಹಣವನ್ನು ಜಪ್ತಿ ಮಾಡಿದ್ದಾರೆ.