ಬೆಂಗಳೂರು: ಕೊರೊನಾ ವ್ಯಾಕ್ಸಿನ್ ಅಸಮರ್ಪಕ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಾಕ್ಸಿನ್ ಪ್ರೊಡೆಕ್ಷನ್ ಆಗದಿದ್ದರೆ ನಾವೇನು ನೇಣು ಹಾಕಿಕೊಳ್ಳಲಾಗುತ್ತಾ..? ಎಂದು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹೈಕೋರ್ಟ್ ಜನರಿಗೆ ಲಸಿಕೆ ಕೊಟ್ಟಿಲ್ಲ ಎಂದು ಹೇಳುತ್ತಿದೆ. ಆದರೆ ಲಸಿಕೆಯೇ ಉತ್ಪಾದನೆಯಾಗದಿರುವಾಗ ನಾವು ಎಲ್ಲಿಂದ ಕೊಡಲು ಸಾಧ್ಯ..? ಈಗೇನು ನಾವು ನೇಣುಹಾಕಿಕೊಳ್ಳಲು ಆಗುತ್ತಾ…? ನಾಳೆಯೇ ವ್ಯಾಕ್ಸಿನ್ ಕೊಡಿ ಎಂದರೆ ಹೇಗೆ…? ಲಸಿಕೆ ಉತ್ಪಾದನೆಗೆ ಸಮಯಬೇಕು ಹಾಗಾಗಿ ದೇಶದಲ್ಲಿ ಲಸಿಕೆ ಕೊರತೆಯುಂಟಾಗಿದೆ ಎಂದು ಉಡಾಫೆ ಮಾತನ್ನಾಡಿದ್ದಾರೆ.
ಇದೇ ವೇಳೆ ಬ್ಲ್ಯಾಕ್ ಫಂಗಸ್ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆಯಾಗುತ್ತಿದ್ದು, ಈ ಔಷಧಕ್ಕೂ ಬೇಡಿಕೆ ಹೆಚ್ಚುತ್ತಿದೆ. ರಾಜ್ಯಕ್ಕೂ ಈ ಔಷಧ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.