ಮೈಸೂರು: ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ ನ್ಯಾಷನಲ್ ಸರ್ಕಾರ. ಮೂರು ಪಕ್ಷಗಳ ಮುಖಂಡರು ಸೇರಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಯಾಕಾದರೂ ಮೈತ್ರಿ ಸರ್ಕಾರವನ್ನು ಉರುಳಿಸಿದೆವೋ ಎನಿಸುತ್ತಿದೆ ಎಂದು ಎಂ.ಎಲ್.ಸಿ ಹೆಚ್. ವಿಶ್ವನಾಥ್ ಅಲವತ್ತುಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ವಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ರಕ್ಷಿಸುತ್ತಿದ್ದಾರೆ. ಕುಮಾರಸ್ವಾಮಿಯನ್ನು ಸಿದ್ದರಾಮಯ್ಯ ರಕ್ಷಿಸುತ್ತಿದ್ದಾರೆ. ಇವರಿಬ್ಬರೂ ಸೇರಿ ಸಿಎಂ ಯಡಿಯೂರಪ್ಪ ಅವರನ್ನು ರಕ್ಷಿಸುತ್ತಿದ್ದಾರೆ. ಒಬ್ಬರಿಗೊಬ್ಬರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರ್.ಎಸ್.ಎಸ್. ಸರಕಾರ್ಯವಾಹ್ ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ
ಯಡಿಯೂರಪ್ಪನವರು ನ್ಯಾಷನಲ್ ಗೌವರ್ನಮೆಂಟ್ ಚೀಫ್ ಮಿನಿಸ್ಟರ್ ಆಗಿದ್ದಾರೆ. ಬಿ.ಎಸ್.ವೈ ಬುದ್ಧಿಚಾತುರ್ಯದಿಂದ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಭ್ರಷ್ಟಾಚಾರ, ಸಿಡಿ ವಿಷಯದಲ್ಲೂ ಹೊಂದಾಣಿಕೆ ನಡೆಯುತ್ತಿದೆ. ಸಿದ್ದರಾಮಯ್ಯ ಅರ್ಕಾವತಿ ಹಗರಣ ಮುಚ್ಚಿಕೊಳ್ಳಲು, ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮುಚ್ಚಿಕೊಳ್ಳಲು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಬಿಜೆಪಿ ಭ್ರಷ್ಟಾಚಾರ ವೈರಸ್ ಗೆ ಯಾವ ಲಸಿಕೆ ಸಿಗುತ್ತೆ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ತಿರುಗೇಟು ನೀಡಿರುವ ವಿಶ್ವನಾಥ್, ಇದ್ದ ಲೋಕಾಯುಕ್ತ ಎಂಬ ಲಸಿಕೆ ನಾಶ ಮಾಡಿದ್ದು ಯಾರು…? ತಮ್ಮ ಅರ್ಕಾವತಿ ಹಗರಣ ಮುಚ್ಚಿಕೊಳ್ಳಲು ಲೋಕಾಯುಕ್ತಕ್ಕೆ ಬಾಗಿಲು ಹಾಕಿದರು. ಜನರೇನು ದಡ್ಡರಲ್ಲ ಎಂದು ಗುಡುಗಿದ್ದಾರೆ.