ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಗೆ ತರಲಾದ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಜನರು ಕೂಡ ಅನಗತ್ಯ ಓಡಾಟ ನಡೆಸದೆ ಮನೆಗಳಲ್ಲೇ ಇದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ಬಗ್ಗೆ ಕೇಳಿಬರುತ್ತಿದೆ. ಶೀಘ್ರದಲ್ಲಿ ಲಸಿಕೆ ಸಮಸ್ಯೆ ಹಾಗೂ ಆಕ್ಸಿಜನ್ ಕೊರತೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ರಾಜ್ಯಕ್ಕೆ ಹೆಚ್ಚುವರಿಯಾಗಿ 300ರಿಂದ 800 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ. ಅಲ್ಲದೇ 50,000ರಿಂದ 1,22,000 ರೆಮ್ ಡಿಸಿವಿರ್ ಲಸಿಕೆ ನೀಡುವುದಾಗಿ ಭರವಸೆ ನೀಡಿದೆ. ಎಲ್ಲಾ ಜಿಲ್ಲೆಗಳಿಗೂ ರೆಮ್ ಡಿಸಿವಿರ್ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.