ಬೆಂಗಳೂರು: ಬಿಜೆಪಿ ನಾಯಕರ ಹೆಸರು ಹೇಳಿ ವಂಚನೆ ಮಾಡುತ್ತಿದ್ದ ಯುವರಾಜ್ ಸ್ವಾಮಿ ವಿರುದ್ಧ ಇದೀಗ ಮತ್ತೆರಡು ಎಫ್ಐಆರ್ ದಾಖಲಾಗಿದೆ. ಈ ಮೂಲಕ ಯುವರಾಜ್ ವಿರುದ್ಧ ಬರೋಬ್ಬರಿ 11 ಎಫ್ಐಆರ್ ದಾಖಲಾದಂತಾಗಿದೆ.
ಡಾಕ್ಟರ್ ನರಸಿಂಹ ಸ್ವಾಮಿ ಎಂಬುವವರ ಮಗನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಯುವರಾಜ್, 75 ಲಕ್ಷ ರೂ. ಪಡೆದುಕೊಂಡಿದ್ದ ಎಂದು ಆರೋಪಿಸಿ ನರಸಿಂಹ ಸ್ವಾಮಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಪಡೆದ ಯುವರಾಜ್ ಕೆಲಸವನ್ನೂ ಕೊಡಿಸದೇ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಕೇಳಿದರೆ ರೌಡಿಗಳನ್ನು ಬಿಟ್ಟು ಹೆದರಿಸುವುದಲ್ಲದೇ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೊಂದೆಡೆ ಗೋವಿಂದ ಎಂಬುವವರಿಗೂ 30 ಲಕ್ಷ ರೂಪಾಯಿ ವಂಚಿಸಿರುವ ಯುವರಾಜ್, ಗೋವಿಂದ ಅವರ ಅಳಿಯ ವೇಣುಗೋಪಾಲ್ ಎಂಬುವವರಿಗೆ ಕೆಎಂಎಫ್ ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾಗಿ ದೂರು ದಾಖಲಾಗಿದೆ. ಒಟ್ಟಾರೆ ಯುವರಾಜ್ ಸ್ವಾಮಿ ವಿರುದ್ಧ ಬೆಂಗಳೂರಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.