ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಾ ಎಂಬ ಅನುಮಾನ ಆರಂಭವಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿಎಂ ಯಡಿಯೂರಪ್ಪ ಭೇಟಿ ಬೆನ್ನಲ್ಲೇ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸದ್ಯದ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಮಾಜಿ ಸಿಎಂ ಕುಮಾರಸ್ವಾಮಿಯವರು, ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿರಬಹುದು. ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ಬಿಜೆಪಿಯಲ್ಲಿ ಭಾರೀ ಚರ್ಚೆ ನಡೆದಿದೆ. ಸಿಎಂ ಸ್ಥಾನದಿಂದ ಬಿ ಎಸ್ ವೈ ಬದಲಾವಣೆ ಸರಿಯಲ್ಲ ಎಂದು ಹೇಳುವ ಮೂಲಕ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಲಾಬಿಯೂ ಆರಂಭವಾಗಿದೆ ಈ ಬಗ್ಗೆ ಬಿಜೆಪಿ ಹಿರಿಯ ಮುಖಂಡರೊಬ್ಬರು ನನಗೆ ಮಾಹಿತಿ ನೀಡಿದ್ದಾರೆ. ಆದರೆ ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಾವಣೆ ಮಾಡುವುದು ಸರಿಯಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ಬಿ.ಎಸ್. ಯಡಿಯೂರಪ್ಪನವರು. ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರಿಗೆ ಇದು ಕೊನೆ ಅವಧಿ. ಸಿಎಂ ಆಗಿ ಅವರು ಸಾಕಷ್ಟು ಹೋರಾಟ ನಡೆಸಿದ್ದಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.