ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಡಿಯಲ್ಲಿರುವ ಯುವತಿ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ವಿಡಿಯೋದಲ್ಲಿ ಯುವತಿ ಮೊದಲು ತನ್ನ ತಂದೆ-ತಾಯಿಗಳಿಗೆ ರಕ್ಷಣೆ ನೀಡಿ. ಅವರಿಗೆ ರಕ್ಷಣೆ ನೀಡಿದ್ದು ಖಚಿತವಾದರೆ ನಾನು ಬಂದು ಎಸ್ಐಟಿ ಮುಂದೆ ನನ್ನ ಹೇಳಿಕೆ ದಾಖಲಿಸುತ್ತೇನೆ ಎಂದು ತಿಳಿಸಿದ್ದಾಳೆ.
ರೂಪಾಂತರಿ ಕೊರೊನಾ ಪ್ರಕರಣ ಪತ್ತೆ: 2 ತಿಂಗಳ ಕಾಲ ಜನತೆ ಎಚ್ಚರದಿಂದಿರಿ – ಸಚಿವ ಸುಧಾಕರ್ ಸೂಚನೆ
ಅಲ್ಲದೇ ಮಾರ್ಚ್ 12ರಂದು ನಾನು ಕಮೀಷನರ್ ಆಫೀಸಿಗೆ ಒಂದು ವಿಡಿಯೋ ಮಾಡಿ ಕಳುಹಿಸಿದ್ದೆ. ಆದರೆ ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ್ದು, ದೂರು ದಾಖಲಾದ ಅರ್ಧಗಂಟೆಯಲ್ಲೇ ನನ್ನ ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದರಿಂದ ಏನಾಗುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಎಸ್ಐಟಿ ಅವರು ಯಾರ ಪರ ಕೆಲಸ ಮಾಡುತ್ತಿದ್ದರೆ ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ.
ನನ್ನ ತಂದೆ – ತಾಯಿ ಮಗಳು ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ದಾರೆ. ದೂರಿನ ಬಳಿಕ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ ನನ್ನ ತಂದೆ-ತಾಯಿ ಸ್ವ ಇಚ್ಛೆಯಿಂದ ದೂರು ನೀಡಿಲ್ಲ. ಅವರಿಗೆ ಗೊತ್ತು ನಾನು ಏನೂ ತಪ್ಪು ಮಾಡಿಲ್ಲ ಎಂದು ಅಂದ ಮೇಲೆ ಅವರು ಹೆದರುವ, ದೂರು ನೀಡುವ ಅಗತ್ಯವಿಲ್ಲ. ಹಾಗಾಗಿ ನಾನು ಮಹಿಳಾ ಸಂಘಟನೆಗಳು, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್ ಹಾಗೂ ಎಲ್ಲರಲ್ಲಿ ಕೇಳಿಕೊಳ್ಳುವುದು ಇಷ್ಟೇ. ಮೊದಲು ನನ್ನ ಅಪ್ಪ-ಅಮ್ಮನಿಗೆ ರಕ್ಷಣೆ ನೀಡಿ. ಅವರಿಗೆ ರಕ್ಷಣೆ ನೀಡಿದ್ದು ಖಚಿತವಾದರೆ ನಾನು ಬಂದು ಎಸ್ಐಟಿ ಮುಂದೆ ಹೇಳಿಕೆ ದಾಖಲಿಸುತ್ತೇನೆ ಎಂದು ತಿಳಿಸಿದ್ದಾಳೆ.