ಕೋಲಾರ: ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಎಂದಿಗೂ ರೈತರಿಗೆ ದ್ರೋಹ ಮಾಡಲ್ಲ, ರೈತರು ಕಾಯ್ದೆ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತ ಮುಖಂಡರು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಬಗ್ಗೆ ಮೊದಲು ಅರಿತುಕೊಳ್ಳಬೇಕು. ನಾವು ಕೂಡ ಆರಂಭದಲ್ಲಿ ಕಾಯ್ದೆ ವಿರೋಧಿಸಿದ್ದೆವು. ಅದರಲ್ಲಿರುವ ಮಾರಕ ಅಂಶಗಳ ಬಗ್ಗೆ ಗಮನ ಸೆಳೆದೆವು. ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಲ ತಿದ್ದುಪಡಿ ಅಂಶಗಳನ್ನು ಕೈಬಿಟ್ಟಿದ್ದಾರೆ. ಹೀಗಾಗಿ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಚಿಹ್ನೆಗೆ ವ್ಯಾಲ್ಯೂ ಇಲ್ಲ. ಹಾಗಾಗಿ ಹಸಿರು ಟವೆಲ್ ಹಾಕಿಕೊಂಡು ಬೀದಿಗಿಳಿದು ಹೋರಾಡುತ್ತಿದ್ದಾರೆ. ಹಾಗಂತ ನಾನು ಬಿಜೆಪಿ ಬಗ್ಗೆ ಸಾಫ್ಟ್ ಆಗಿ ಮಾತನಾಡುತ್ತಿಲ್ಲ ಎಂದು ಹೇಳಿದರು.