ಬೆಂಗಳೂರು: ಕೊರೊನಾ ಭೀಕರತೆ ಬೆನ್ನಲ್ಲೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾದಿಂದ ಗುಣಮುಖರಾದ ಬಹುತೇಕರು ಕಪ್ಪು ಶಿಲೀಂದ್ರ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಇಂಜಕ್ಷನ್ ಕೊರತೆ ಕೂಡ ಎದುರಾಗಿದ್ದು, ದುಬಾರಿ ಇಂಜಕ್ಷನ್ ಖರೀದಿ ವೆಚ್ಚ ಭರಿಸುವುದು ಸೋಂಕಿತರಿಗೆ ಮಾತ್ರವಲ್ಲ ರಾಜ್ಯ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ಹಲವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದ್ದು, ಮಾರಕ ಫಂಗಸ್ ಗೆ ಅನೇಕರು ಬಲಿಯಾಗುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ಅಗತ್ಯವಿರುವ ರೆಮ್ ಡಿಸಿವಿರ್, ವ್ಯಾಕ್ಸಿನ್, ಆಕ್ಸಿಜನ್, ವೈದ್ಯಕೀಯ ಉಪಕರಣಗಳ ಕೊರತೆ ನಡುವೆಯೇ ಇದೀಗ ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ಔಷಧವಾಗಿರುವ Liposomal Amphotericin b ಇಂಜಕ್ಷನ್ ಅಭಾವ ಎದುರಾಗಿದೆ. ಈ ಔಷಧ ಪೂರೈಕೆಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮೊರೆ ಇಟ್ಟಿದೆ.
ಬ್ಯಾಂಕ್ ಗ್ರಾಹಕರಿಗೆ RBI ನಿಂದ ಮಹತ್ವದ ಮಾಹಿತಿ: ಮೇ 23 ರಂದು ಕೆಲ ಸಮಯದವರೆಗೆ ಲಭ್ಯವಿರೋಲ್ಲ NEFT ಸೇವೆ
ಓರ್ವ ಬ್ಲ್ಯಾಕ್ ಫಂಗಸ್ ಸೋಂಕಿತ ರೋಗಿಗೆ 50 ಡೋಸ್ ಇಂಜಕ್ಷನ್ ನೀಡಬೇಕು. ಒಂದು ಡೋಸ್ ಇಂಜಕ್ಷನ್ ಬೆಲೆ 6,500 ರೂ. ಅಂದರೆ ಒಬ್ಬ ಬ್ಲ್ಯಾಕ್ ಫಂಗಸ್ ಸೋಂಕಿತನ ಇಂಜಕ್ಷನ್ ಗೆ ಕನಿಷ್ಠ 3,25,000 ರೂ. ಅಗತ್ಯವಿದೆ. ಹೀಗಿರುವಾಗ ಪ್ರಸ್ತುತ ರಾಜ್ಯದಲ್ಲಿ ಎಲ್ಲಿಯೂ ಬ್ಲ್ಯಾಕ್ ಫಂಗಸ್ ಗೆ ಇಂಜಕ್ಷನ್ ಕೂಡ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಜನರು ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಬಗ್ಗೆ ಮಾಹಿತಿಗಳಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.