ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿಕ್ಕ ಮಕ್ಕಳ ಹೆಲ್ಮೆಟ್ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ಸಾರಿಗೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರ ಪ್ರಕಾರ ನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ಶಾಲೆಗೆ ಹೋಗುವ ಚಿಕ್ಕ ಮಕ್ಕಳು ದ್ವಿಚಕ್ರ ವಾಹನದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ.
ಕೇಂದ್ರ ಸಾರಿಗೆ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2019 ರಲ್ಲಿ ರಸ್ತೆ ಅಪಘಾತಗಳಲ್ಲಿ 11,168 ಮಕ್ಕಳು ಸಾವನ್ನಪ್ಪಿದ್ದಾರೆ. ಅದರಲ್ಲಿ 460 ಮಕ್ಕಳು ಕರ್ನಾಟಕ ಮೂಲದವರು. ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ.
ಹೊಸ ನಿಯಮ ಈಗಾಗಲೇ ಜಾರಿಗೆ ಬಂದಿದೆ. ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿಯನ್ನು 3 ತಿಂಗಳವರೆಗೆ ರದ್ದುಗೊಳಿಸಲಾಗುತ್ತಿದೆ. ದಂಡ ವಿಧಿಸಲಾಗುತ್ತಿದೆ. ಹೊಸ ನಿಯಮ ಜಾರಿಗೆ ಬರುತ್ತಿದ್ದಂತೆ, ಲಾಲ್‌ಬಾಗ್ ರಸ್ತೆ ಮತ್ತು ಜೆಸಿ ರಸ್ತೆಯಲ್ಲಿ ಹೆಲ್ಮೆಟ್‌ಗಳ ಬೇಡಿಕೆ ಹೆಚ್ಚಾಗಿದೆ. ಜನರು ಮಕ್ಕಳ ಹೆಲ್ಮೆಟ್ ಖರೀದಿಗೆ ಮುಂದಾಗಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಹೆಲ್ಮೆಟ್ ಗೆ ಬೇಡಿಕೆ ಕಡಿಮೆಯಾಗಿತ್ತು. ಆದ್ರೆ ಹೊಸ ನಿಯಮದ ನಂತ್ರ ಮಕ್ಕಳ ಹೆಲ್ಮೆಟ್ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗ್ತಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಬೇಡಿಕೆ ಹೆಚ್ಚಾಗ್ತಿದೆ, ಆದ್ರೆ ಮಕ್ಕಳ ಹೆಲ್ಮೆಟ್ ಸಂಖ್ಯೆ ಕಡಿಮೆಯಿದೆ. ಮಾರುಕಟ್ಟೆಯಲ್ಲಿ ಮಕ್ಕಳ ಹೆಲ್ಮೆಟ್ ವಿನ್ಯಾಸ ಕಡಿಮೆಯಿದೆ. ಹೆಚ್ಚಿನ ಹೆಲ್ಮೆಟ್ ಗಳು ಭಾರವಾಗಿದ್ದು, ಮಕ್ಕಳಿಗೆ ಸರಿಹೊಂದುತ್ತಿಲ್ಲ.