ಬೆಂಗಳೂರು: ಮಾಸ್ಕ್ ಧರಿಸದವರಿಗೆ ದುಬಾರಿ ದಂಡ ವಿಧಿಸಿದ್ದ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ದಂಡದ ಪ್ರಮಾಣ ಕಡಿಮೆ ಮಾಡಿದ್ದ ಬೆನ್ನಲ್ಲೇ ಸಾರ್ವಜನಿಕರು ಮಾಸ್ಕ್ ಧರಿಸದೆ ಮತ್ತೆ ಬೇಜವಾಬ್ದಾರಿ ಮೆರೆದಿದ್ದರು. ಇದೀಗ ಬಿಬಿಎಂಪಿ ಮಾಸ್ಕ್ ದಂಡವನ್ನು ಮತ್ತೆ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ಹೋಟೆಲ್, ಅಂಗಡಿ, ಚಿತ್ರಮಂದಿರ, ಮಾಲ್, ಕಲ್ಯಾಣ ಮಂಟಪಕ್ಕೆ ಬರುವ ಜನರು ಮಾಸ್ಕ್ ಧರಿಸದಿದ್ದರೆ ಮಾಲೀಕರು ಹಾಗೂ ಆಯೋಜಕರಿಗೆ 5000 ರೂ. ನಿಂದ 1 ಲಕ್ಷದವರೆಗೆ ದಂಡ ಪಾವತಿಸಬೇಕು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಮಾಸ್ಕ್ ಧರಿಸದಿದ್ದರೆ 5000 ರೂ., ರೆಸ್ಟೋರೆಂಟ್, ಪಾರ್ಟಿ ಹಾಲ್, ಖಾಸಗಿ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ 25,000 ರೂ., ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿಗಳಲ್ಲಿ 50,000 ರೂ. ಹಾಗೂ ಶಾಪಿಂಗ್ ಮಾಲ್, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ 1 ಲಕ್ಷದವರೆಗೂ ದಂಡ ವಿಧಿಸಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.