ಬೆಂಗಳೂರು: ಬಿಜೆಪಿ ಬ್ಲಾಕ್ ಮೇಲರ್ಸ್, ಭ್ರಷ್ಟಾಚಾರಿಗಳ ಪಕ್ಷ. ಹಾಗಂತ ನಾನು ಹೇಳುತ್ತಿಲ್ಲ, ಸ್ವತ: ಭಾರತೀಯ ಜನತಾ ಪಕ್ಷದ ಶಾಸಕರು, ಸಚಿವರೇ ಹೇಳಿಕೆ ನೀಡುತ್ತಿದ್ದಾರೆ. ಇಡಿ, ಸಿಬಿಐ, ಎಸಿಬಿ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದು ತನಿಖಾ ಸಂಸ್ಥೆಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಹಿಂದೆ ಕಾರವಾರದಲ್ಲಿ ಹೆಳಿದಾಗ ಸಿಡಿ ಏನೂ ಇಲ್ಲ ಅಂದಿದ್ದರು. ಈಗ ಅವರದೇ ಪಕ್ಷದ ನಾಯಕರು ಸಿಡಿ ವಿಚಾರ ಹೇಳುತ್ತಿದ್ದಾರೆ. ಸಿಡಿ ಒಳಗೆ ಏನಿದೆ, ಭ್ರಷ್ಟಾಚಾರ ಎಷ್ಟು ನಡೆದಿದೆ ಎಂದು ಅವರಿಗೆ ಗೊತ್ತಿದೆ. ಇಡಿ, ಎಸಿಬಿ, ಸುಮೋಟೊ ಕೇಸ್ ಯಾಕೆ ಹಾಕಿಲ್ಲ? ಈಗೇಕೆ ಎಲ್ಲಾ ಸುಮ್ಮನಿದ್ದಾರೆ? ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಕೃಷಿ ಕಾಯ್ದೆ ವಿರುದ್ಧ ಜನವರಿ. 20ರಂದು ಬೃಹತ್ ಚಳುವಳಿ ನಡೆಸುತ್ತಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬಂದು ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ. ರೈತರ ನೋವು ಸುಪ್ರೀಂ ಕೋರ್ಟ್ ಗೆ ಕೂಡ ಅರಿವಾಗಿದೆ. ಹೀಗಾಗಿ ಕಾಯ್ದೆ ಜಾರಿಗೆ ನ್ಯಾಯಾಲಯ ತಡೆ ನೀಡಿದೆ. ಆದರೂ ರೈತರಿಗೆ ಸಮಾಧಾನ ತಂದಿಲ್ಲ. ಜ.15ರಂದು ರಾಷ್ಟ್ರವ್ಯಾಪಿ ಆಂಧೋಲನ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತದೆ. ಈ ನಿಟ್ಟಿನಲ್ಲಿ ನಾವು ಕೂಡ ಜ.20ರಂದು ಚಳುವಳಿ ನಡೆಸುತ್ತಿದ್ದೇವೆ ಎಂದು ಹೆಳಿದರು.