ಕಲಬುರ್ಗಿ: ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನ ಬಹಿರಂಗವಾಗಿದ್ದರೂ ಸಮರ್ಥಿಸಿಕೊಂಡಿರುವ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಮ್ಮ ಪಕ್ಷದಲ್ಲಿನ ಬಿಕ್ಕಟ್ಟಿಗಿಂತ ಕಾಂಗ್ರೆಸ್ ಪಕ್ಷದಲ್ಲಿ ಸಂಭವಿಸುತ್ತಿರುವ ಕಿತ್ತಾಟವೇ ಅಧಿಕ. ಅವರಲ್ಲಿ ಸಮಸ್ಯೆ ಬಗೆಹರಿಸುವ ವ್ಯವಸ್ಥೆಯೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರು ಹಾಗೂ ವರಿಷ್ಠರಿಗೆ ನೀಡಿದ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ನಮ್ಮಲ್ಲಿ ಕೆಲವು ಸಮಸ್ಯೆಗಳಾಗಿರುವುದು ನಿಜ. ಆದರೆ ಅವುಗಳನ್ನು ನಾವು ಸರಿಪಡಿಸುತ್ತೇವೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಸಂಜೆಯೊಳಗೆ ಸಚಿವ ಈಶ್ವರಪ್ಪರನ್ನು ವಜಾ ಮಾಡಲಿ, ಇಲ್ಲವೇ ಸಿಎಂ ರಾಜೀನಾಮೆ ನೀಡಲಿ: ಡಿ.ಕೆ.ಶಿವಕುಮಾರ್ ಆಗ್ರಹ
ನಮ್ಮ ಪಕ್ಷದಲ್ಲಿ ಹೊಗೆ ಈಗಷ್ಟೇ ಶುರುವಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಬೆಂಕಿಯೇ ಬಿದ್ದಿದೆ. ನಮ್ಮಲ್ಲಿ ಸಮಸ್ಯೆ ಸರಿಪಡಿಸುವ ವ್ಯವಸ್ಥೆ ಇದೆ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಚೆನ್ನಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಸರಿಪಡಿಸುವ ವ್ಯವಸ್ಥೆಯೇ ಇಲ್ಲ, ಪ್ರಜಾಪ್ರಭುತ್ವವೂ ಇಲ್ಲ ಎಂದು ಟೀಕಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೋದಲೆಲ್ಲ ಹೇಳುತ್ತಿದ್ದಾರೆ. ಅದರೆ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಮುಂದಿನ ಸಿಎಂ ಅಲ್ಲ, ನಾನು ಸಿಎಂ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಇಬ್ಬರು ನಾಯಕರ ನಡುವೆ ಬೀದಿ ಜಗಳವೇ ನಡೆಯುತ್ತಿದೆ. ಸರಿಪಡಿಸುವವರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.