ಬೆಂಗಳೂರು: ಅಚ್ಚೇ ದಿನ್ ಆಯೇಗಾ ಎಂದು ನಂಬಿಸಿ ಮೋದಿ ಅಧಿಕಾರಕ್ಕೆ ಬಂದು ಜನರಿಗೆ ಟೋಪಿ ಹಾಕಿದ್ದಾರೆ. ಹಾಗಾಗಿ ಮುಖ ತೋರಿಸಬಾರದು ಎಂದು ಈಗ ಗಡ್ಡ ಬೆಳೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಜಿಡಿಪಿ ಕುಸಿದಿದೆ. ಮುಂದಿನ ವರ್ಷವೂ ಜಿಡಿಪಿ ಕುಸಿಯಲಿದೆ. ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರೈತ ವಿರೋಧಿ ಕೃಷಿ ಕಾಯ್ದೆ ಜಾರಿ ಮಾಡಿದ್ದಾರೆ. ಕಳೆದ ಮೂರು ತಿಂಗಳಿಂದ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಗೆ ಮುಖ ತೋರಿಸಲು ಸಾಧ್ಯವಾಗದೇ ಗಡ್ಡ ಬೆಳೆಸಿದ್ದಾರೆ ಎಂದು ಗುಡುಗಿದರು.
ಮೋದಿ ವಿರೋಧಿಸಲು ದಾವೂದ್ ಗೆ ಬೆಂಬಲ: ಸಿದ್ಧರಾಮಯ್ಯ, ಕುಮಾರಸ್ವಾಮಿ ವಿರುದ್ಧ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ
ಇದೇ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ರಾಜ್ಯದಲ್ಲಿರುವುದು ಅಸಮರ್ಥ, ಭ್ರಷ್ಟ ಸರ್ಕಾರ. ಬಹುಮತ ಸಾಬೀತು ಮಾಡಲಾಗದೇ ಮೊದಲು ವಿಫಲರಾಗಿದ್ದರು. ಸರ್ಕಾರ ಟೇಕಾಫ್ ಅಲ್ಲ ಸಂಪೂರ್ಣ ಆಫ್ ಆಗಿ ಕುಳಿತಿದೆ ಎಂದು ಹೇಳಿದರು.