ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಬರುತ್ತಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ, ದುಡಿಯುವ ವರ್ಗಕ್ಕೆ ನೆರವು ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.
ಕೊರೊನಾ ಮಾಹಾಮಾರಿಯಿಂದಾಗಿ ಈಗಾಗಲೇ ಹಲವು ಕ್ಷೇತ್ರಗಳ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಅನೇಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಲಾಕ್ ಡೌನ್ ಜಾರಿಯಾಗುತ್ತಿರುವುದರಿಂದ ನಗರಗಳನ್ನು ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ ನೆರವಿಗೆ ನಿಲ್ಲಬೇಕು. ಪ್ರತಿ ಕುಟುಬಕ್ಕೆ 10 ಕೆಜಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮುಂತಾದ ದಿನಸಿ ಪದಾರ್ಥಗಳ ಕಿಟ್ ನೀಡಬೇಕು. ರೈತರು, ಕುಶಲಕರ್ಮಿಗಳು, ಕಾರ್ಮಿಕರು, ಚಾಲಕರು ಹಾಗೂ ಪ್ರತಿ ಬಿಪಿಎಲ್ ಕುಟುಂಬಕ್ಕೆ ಆರಂಭದಲ್ಲಿ 10,000 ರೂಪಾಯಿಗಳನ್ನು ನಂತರ ತಿಂಗಳಿಗೆ 6000 ರೂ. ಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ತೊರೆದು ಊರಿನತ್ತ ಜನರ ಲಗ್ಗೆ, ಹಳ್ಳಿಗಳಲ್ಲೂ ಹೆಚ್ಚಾಯ್ತು ಕೊರೋನಾ ಆತಂಕ
ನಗರವಾಸಿಗಳು ಹಳ್ಳಿಗಳಿಗೆ ವಾಪಸ್ ಆಗುತ್ತಿದ್ದಾರೆ. ಈ ವೇಳೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಬೇಕು. ಕನಿಷ್ಟ 200 ಮಾನವ ದಿನ ಯೋಜನೆ ಜಾರಿ ಮಾಡಬೇಕು. ಹಣದುಬ್ಬರ ಆಧರಿಸಿ ನರೇಗಾ ಕೂಲಿ ಮೊತ್ತ ಪರಿಶೀಲಿಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವವರ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾವಾರು ಆಕ್ಸಿಜನ್ ಘಟಕ ಸ್ಥಾಪಿಸಬೇಕು. ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ದಂಧೆಗೆ ಬ್ರೇಕ್ ಹಾಕಿ. ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಆಕ್ಸಿಜನ್ ಸುಲಭವಾಗಿ ಸಿಗುವಂತೆ ಮಾಡಿ. ಕಳೆದ ವರ್ಷ ತರಿಸಿಕೊಂಡ ವೆಂಟಿಲೇಟರ್ ಗಳನ್ನು ಬಳಸಿ, ಅಗತ್ಯವಿದ್ದರೆ ಕಲ್ಯಾಣ ಮಂಟಪ, ಕ್ರೀಡಾಂಗಣ, ಹಾಸ್ಟೇಲ್, ಸಭಾಭವನಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಮಾರ್ಪಡಿಸಿ. ವೈದ್ಯರ ವಿಚಾರವಾಗಿ ಖಾಸಗಿ, ನಿವೃತ್ತ ವೈದ್ಯರನ್ನು, ದಾದಿಯರನ್ನು ನೇಮಿಸಿಕೊಳ್ಳಬೇಕು. ಈಗಗಾಲೇ ಕೋವಿಡ್ ಲಸಿಕೆ ಪಡೆದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ನಿಯೋಜನೆ ಮಾಡಿ ಎಂದು ಸಲಹೆ ನೀಡಿದ್ದಾರೆ.