ವಿಧಾನಪರಿಷತ್ ಚುನಾವಣೆ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿಗಳು ಮತ್ತು ಕೇಂದ್ರ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯೇ ಅಥವಾ ಪುನರ್ ರಚನೆಯೇ ಎಂಬುದರ ಕುರಿತಾಗಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆಯೇ ಬೇರೆ, ವಿಧಾನಸಭಾ ಅಭ್ಯರ್ಥಿಗಳ ಆಯ್ಕೆಯೇ ಬೇರೆಯಾಗಿದೆ. ರಾಜ್ಯಸಭೆಗೆ ಕೇಂದ್ರ ಸಮಿತಿ ರಾಜ್ಯದಿಂದ ಪ್ರತಿಕ್ರಿಯೆ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅದೇ ರೀತಿ ವಿಧಾನಪರಿಷತ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ ಅವರು, ರಾಜ್ಯಸಭೆಗೆ ರಾಜ್ಯದಿಂದ ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಮಾಡಿ ಶಿಫಾರಸು ಮಾಡಲಾಗಿತ್ತು. ಇಲ್ಲಿಂದ ಕಳುಹಿಸಿದ ಅಭ್ಯರ್ಥಿಗಳ ಬದಲಿಗೆ ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿದ್ದು, ಇದರಿಂದ ಕಾರ್ಯಕರ್ತರಿಗೂ ಸಂತೋಷವಾಗಿದೆ ಎಂದರು.
ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಯೇ ಬೇರೆಯಾಗಿದೆ. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿದ್ದವರು ಬಿಜೆಪಿಗೆ ಬಂದಿದ್ದು, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಋಣ ತೀರಿಸಬೇಕಿದೆ. ಮೋಸ ಮಾಡುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ. ಜೊತೆಗೆ ಅನೇಕ ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡಿದ ಸಾಮಾನ್ಯ ಕಾರ್ಯಕರ್ತರು ತುಂಬಾ ಜನರಿದ್ದಾರೆ. ಅವರಿಗೂ ಅವಕಾಶ ಮಾಡಿಕೊಡಬೇಕಿದೆ ಎಂದರು.