ಬೆಳಗಾವಿ: ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ದರ್ಪ, ದುರಹಂಕಾರ ಮತ್ತೊಮ್ಮೆ ಬಯಲಾಗಿದೆ. ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಸಚಿವರು ಸತ್ತು ಹೋಗು ಎಂದು ಹೇಳಿದ್ದಾರೆ. ಸಚಿವರ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಹಾರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈಶ್ವರ ಎಂಬ ವ್ಯಕ್ತಿ ಆಹಾರ ಸಚಿವ ಉಮೇಶ್ ಕತ್ತಿಯವರಿಗೆ ಕರೆ ಮಾಡಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕೇವಲ 2 ಕೆ.ಜಿ ಪಡಿತರ ಅಕ್ಕಿ ಕೊಡುತ್ತೀದ್ದೀರಾ ಇಷ್ಟು ಕಡಿಮೆ ಅಕ್ಕಿಯಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾನೆ.
ಅದಕ್ಕೆ ಉತ್ತರಿಸಿದ ಆಹಾರ ಸಚಿವರು 2 ಕೆ.ಜಿ ಅಕ್ಕಿ, 3ಕೆಜಿ ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತಿದ್ದೇವೆ. ಮೇ, ಜೂನ್ ತಿಂಗಳಿಂದ ಕೇಂದ್ರ ಸರ್ಕಾರದಿಂದ 5 ಕೆ.ಜಿ ಪಡಿತರ ನೀಡಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವ್ಯಕ್ತಿ ಉತ್ತರ ಕರ್ನಾಟಕ ಭಾಗಕ್ಕೆ ಏನು ಕೊಡುತ್ತಿದ್ದೀರಾ ಕೇವಲ 2 ಕೆ.ಜಿ ಅಕ್ಕಿ ಮಾತ್ರ ಸಿಗುತ್ತಿದೆ. ಮುಂದಿನ ತಿಂಗಳಿಂದ ಕೊಡುತ್ತೀರಿ ಎನ್ನುವುದಾದರೆ ಲಾಕ್ ಡೌನ್ ನಿಂದಾಗಿ ಈಗಾಗಲೇ ಎಲ್ಲವೂ ಬಂದ್ ಆಗಿದೆ. ಕೆಲಸವೂ ಇಲ್ಲ, ಊಟಕ್ಕೂ ಇಲ್ಲದೇ ಅಲ್ಲಿಯವರೆಗೆ ನಾವು ಸಾಯಬೇಕೆ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಸಚಿವರು ಸತ್ತು ಹೋಗು… ನನಗೆ ಫೋನ್ ಮಾಡಬೇಡ ಎಂದು ಕಿಡಿಕಾರಿದ್ದಾರೆ.
ಊಟಕ್ಕಾಗಿ ಪಡಿತರ ಅಕ್ಕಿ ಕೇಳಿದ್ದಕ್ಕೆ ಆಹಾರ ಸಚಿವರ ದೌಲತ್ತಿನ ಉತ್ತರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.