ಬೆಂಗಳೂರು: ಕೊರೊನಾ ಲಸಿಕೆ ಕೊರತೆ ಹಾಗೂ ನೀಡಿಕೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಕಿಡಿಕಾರಿದ ಬೆನ್ನಲ್ಲೇ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ನ್ಯಾಯಾಧೀಶರೇನು ಸರ್ವಜ್ಞರಲ್ಲ, ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ಲಸಿಕೆ ಹಂಚಲಾಗುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಹೈಕೋರ್ಟ್ ತರಾಟೆಗೆ ಪ್ರತಿಕ್ರಿಯಿಸಿ, ನ್ಯಾಯಾಧೀಶರು ಸರ್ವಜ್ಞರಲ್ಲ. ನಾವು ತಂತ್ರಜ್ಞರ ಸಲಹೆಯಂತೆಯೇ ಕೆಲಸ ಮಾಡುತ್ತಿದ್ದೇವೆ. ಲಸಿಕೆ ಎಷ್ಟು ಉತ್ಪಾದನೆ ಆಗುತ್ತದೆ. ಯಾವ ಪ್ರಮಾಣದಲ್ಲಿ ಲಸಿಕೆ ಹಂಚಿಕೆಯಾಗಬೇಕು ಎಂಬುದನ್ನು ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆ ಪ್ರಕಾರ ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಅದರಂತೆ ನಾವು ಪಾಲಿಸುತ್ತಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಬ್ಲಾಕ್ ಫಂಗಸ್ ಗೆ ಇಬ್ಬರು ಸೋಂಕಿತರು ಬಲಿ; ಮತ್ತಿಬ್ಬರ ಸ್ಥಿತಿ ಗಂಭೀರ
ರಾಜ್ಯ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿ ಇದೀಗ ಲಸಿಕೆ ಕೊರತೆ ಕಾರಣ ನೀಡುತಿದೆ. ಸಮರ್ಪಕವಾಗಿ ವ್ಯಾಕ್ಸಿನ್ ನೀಡುತ್ತಿಲ್ಲ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮೊದಲನೇ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲು ವಿಳಂಬವಾಗುತ್ತಿರುವುದಕ್ಕೆ ಛೀಮಾರಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿ.ಟಿ.ರವಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.