ಚಾಮರಾಜನಗರ: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಯಾವುದೇ ಮನವಿಗೂ ಪ್ರತಿಭಟನಾಕಾರರು ಬಗ್ಗುತ್ತಿಲ್ಲ. ಈ ನಡುವೆ ಸರ್ಕಾರ ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ರಾಜ್ಯಾದ್ಯಾಂತ ಮುಷ್ಕರ ಮುಂದುವರೆಸಿದ್ದಾರೆ. ಮುಷ್ಕರ ಹತ್ತಿಕ್ಕಲು ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಒಂದೆಡೆ ನಿವೃತ್ತ ನೌಕರರನ್ನು ಕರೆಸಿ ಸರ್ಕಾರಿ ಬಸ್ ಓಡಾಟಕ್ಕೆ ವ್ಯವಸ್ಥೆ ಮಾಡಿದ್ದರೆ, ಮುಷ್ಕರದಲ್ಲಿ ಭಾಗಿಯಾದವರ ಸಂಬಳ ಕಟ್ ಮಾಡುತ್ತಿದೆ. ಇನ್ನೊಂದೆಡೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಮನೆ ಖಾಲಿ ಮಾಡುವಂತೆ ನೋಟೀಸ್ ಜಾರಿ ಮಾಡಿದೆ. ಇಷ್ಟೆಲ್ಲ ಬೆದರಿಕೆ ಹಾಕಿದರೂ ಸರ್ಕಾರದ ಯಾವ ಕ್ರಮಕ್ಕೂ ಮುಷ್ಕರ ನಿರತ ಸಿಬ್ಬಂದಿಗಳು ಜಗ್ಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಹಲವು ಸಾರಿಗೆ ಸಿಬ್ಬಂದಿಗಳನ್ನೇ ಸರ್ಕಾರ ವರ್ಗಾವಣೆ ಮಾಡಿದೆ.
ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು..!
ಚಾಮರಾಜನಗರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 20ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಗಳನ್ನು ಪುತ್ತೂರು ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದರೂ ಕೆಲಸಕ್ಕೆ ಹಾಜರಾಗದೇ ಮುಷ್ಕರದಲ್ಲಿ ಭಾಗಿಯಾಗಿದ್ದಕ್ಕೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ ಎನ್ನಲಾಗಿದೆ.