ಬೆಂಗಳೂರು: ಕೊರೊನಾ ರೂಪಾಂತರ ವೈರಸ್ ತಡೆಗೆ ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವ ನೈಟ್ ಕರ್ಫ್ಯೂ ಕುರಿತು ಸ್ವಪಕ್ಷೀಯ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಹಗಲು ಮದುವೆ, ಸಭೆ-ಸಮಾರಂಭಗಳಿಗೆ ಅನುಮತಿ ನೀಡಿ, ಕ್ರಿಸ್ ಮಸ್ ಕಾರ್ಯಕ್ರಮಕ್ಕೂ ಅನುಮತಿ ನೀಡಿ ರಾತ್ರಿ 11 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಿದರೆ ಏನು ಪ್ರಯೋಜನ? ರಾತ್ರಿ 11ರ ಬಳಿಕ ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಆಗ ಯಾರು ಹೊರಗೆ ಬರುತ್ತಾರೆ? ಆ ವೇಳೆ ಕರ್ಫ್ಯೂ ಜಾರಿ ಮಾಡುವುದರಲ್ಲಿ ಅರ್ಥವಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ರಾತ್ರಿ ಕೊರೊನಾ ಹೆಚ್ಚಾಗುತ್ತಾ? ಹಗಲಲ್ಲಿ ಹೆಚ್ಚಾಗುತ್ತಾ? ಹಗಲೆಲ್ಲ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಿ ರಾತ್ರಿ ಕರ್ಫ್ಯೂ ಜಾರಿ ಮಾಡುತ್ತಿರುವುದು ಯಾಕೆ? ಸಮರ್ಪಕವಾಗಿ ಚರ್ಚೆ ನಡೆಸದೇ ಗೊಂದಲದಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.
ಇದೇ ವೇಳೆ ಎಂ.ಎಲ್.ಸಿ. ಹೆಚ್. ವಿಶ್ವನಾಥ್ ಕೂಡ ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಇದನ್ನು ಕಾಮಿಡಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಪುನರ್ ಪರಿಶೀಲಿಸುವ ಅಗತ್ಯವಿದೆ. ನನ್ನ ಪ್ರಕಾರ ಡಿಸೆಂಬರ್ 30 ಹಾಗೂ 31ರಂದು ಕರ್ಫ್ಯೂ ಜಾರಿ ಮಾಡುವುದು ಒಳಿತು ಎಂದಿದ್ದಾರೆ.