ರಾಯಚೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗಾಗಿ ಕರ್ಫ್ಯೂ ಅನಿವಾರ್ಯವಾಗಿದೆ. ಸ್ವತ: ಪ್ರಧಾನಿ ಮೋದಿ ಕರೆ ಮಾಡಿ ಕೊರೊನಾ ನಿಯಂತ್ರಣದ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಚರ್ಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾರೂ ಕೂಡ ನೈಟ್ ಕರ್ಫ್ಯೂ ಉಲ್ಲಂಘನೆ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಹೆಚ್ಚಿರುವ ಸ್ಥಳಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ, ದೈಹಿಕ ಅಂತರ ಪಾಲನೆ ಮಾಡಬೇಕು ಎಂದು ಹೇಳಿದರು.
ಯಡಿಯೂರಪ್ಪರಿಗೆ ಕರೆ ಮಾಡಿ ಕಠಿಣ ಕ್ರಮಕ್ಕೆ ಸೂಚಿಸಿದ ಮೋದಿ, ರಾಜ್ಯದಲ್ಲಿ ಸೋಂಕು ತಡೆಗೆ ಮತ್ತಷ್ಟು ನಿರ್ಬಂಧ ಸಾಧ್ಯತೆ
ಇನ್ನು ಕೊರೊನಾ ಲಸಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಪ್ರಧಾನಿ ಮೋದಿ ಅವರು ಎರಡು ಬಾರಿ ಲಸಿಕೆ ಪಡೆದಿದ್ದಾರೆ. ನಾನೂ ಕೂಡ ಲಸಿಕೆ ಹಾಕಿಸಿಕೊಂಡಿದ್ದೇನೆ. ಲಸಿಕೆ ಸುರಕ್ಷಿತವಾಗಿದೆ ಎಂದು ಹೇಳಿದರು.