ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ನಿಮ್ಮ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಡಿನೋಟಿಫಿಕೇಷನ್ ಪ್ರಕರಣ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದರು. ಸಿದ್ದರಾಮಯ್ಯನವರೇ ನೀವು ಓರ್ವ ವಕೀಲರಾಗಿದ್ದವರು, ಬುದ್ಧಿವಂತರು ನಿಮಗೆ ಹೇಳುವಷ್ಟು ದೊಡ್ಡವರು ನಾವಲ್ಲ. ನಾನು ಜಾಮೀನಿನ ಮೇಲೆ ಹೊರಗಿದ್ದೇನೆ ಎಂಬ ಹೇಳಿಕೆ ನೀಡಿದ್ದೀರಿ. ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇಲ್ವಾ? ನಿಮ್ಮ ಅವಧಿಯಲ್ಲಿ ಬಿ ರಿಪೋರ್ಟ್ ಹಾಕಿಸಿಕೊಂಡಿಲ್ವಾ? ಇಂದು ಹಾದಿ ಬೀದಿಯಲ್ಲಿ ಹೋಗುವವರೂ ಕೂಡ ಕೇಸ್ ಹಾಕುತ್ತಿದ್ದಾರೆ. ಯಾರು ಬೇಕಾದರೂ ಕೇಸ್ ಹಾಕಬಹುದು ಆದರೆ ಅದರಿಂದ ಏನೂ ಸಾಧಿಸಲಾಗಲ್ಲ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಸಿಎಂ BSY ಸವಾಲು – ಕುಮಾರಸ್ವಾಮಿ ಪರ ಯಡಿಯೂರಪ್ಪ ಬ್ಯಾಟಿಂಗ್
ಪದೇ ಪದೇ ಯಡಿಯೂರಪ್ಪ ರಾಜೀನಾಮೆ ನೀಡ್ತಾರೆ. ಸಿಎಂ ಬದಲಾಗ್ತಾರೆ ಎಂದು ಹೇಳುತ್ತಲೇ ಬಂದಿದ್ದೀರಾ… ನಾನು ರಾಜೀನಾಮೆ ನೀಡಲಿ ಎಂದು ಕನಸಿನಲ್ಲಿಯೂ ಕನವರಿಸುತ್ತೀರಾ… ಒಂದು ವಿಷಯ ಸ್ಪಷ್ಟಪಡಿಸುತ್ತೇನೆ ಎಲ್ಲಿಯವರೆಗೆ ನನಗೆ ಪ್ರಧಾನಿ ಮೋದಿ, ಅಮಿತ್ ಶಾ ಬೆಂಬಲವಿರುತ್ತದೆಯೋ, ಈ ರಾಜ್ಯದ ಜನತೆ ಆಶೀರ್ವಾದ ಬೆಂಬಲವಿರಿತ್ತದೆಯೋ ಅಲ್ಲಿಯವರೆಗೂ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನನ್ನ ವಿರುದ್ಧ ಇಂಥಹ ನೂರು ಕೇಸ್ ಹಾಕಿದರೂ ಅದೆಲ್ಲವನ್ನೂ ಜಯಿಸಿ ಬರಬಲ್ಲೆ. ನಾನು ಪ್ರಾಮಾಣಿಕ ಎಂದು ಸಾಬೀತು ಪಡಿಸುತ್ತೇನೆ ಎಂಬ ವಿಶ್ವಾಸವಿದೆ. ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಖಚಿತ ಆ ಮೂಲಕ ಶಾಶ್ವತವಾಗಿ ನಿಮ್ಮನ್ನು ವಿಪಕ್ಷದಲ್ಲೇ ಕೂರಿಸುತ್ತೇವೆ ಎಂದು ಹೇಳಿದರು.
ಓರ್ವ ವಿಪಕ್ಷ ನಾಯಕರಾಗಿ ನೀವು ಟೀಕೆ ಮಾಡಿ. ಆಡಳಿತ ವೈಖರಿಯಲ್ಲಿ ತಪ್ಪಿದ್ದರೆ ತಿದ್ದಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮನಸ್ಸಿಗೆ ತೋಚಿದ್ದನ್ನೆಲ್ಲ ಹೇಳುತ್ತಾ ರಾಜ್ಯಪಾಲರ ಹೇಳಿಕೆಯೂ ಸುಳ್ಳು ಎನ್ನುವ ನಿಮ್ಮ ಮಾತಿನ ರೀತಿಯನ್ನು ಇನ್ನಾದರೂ ಬದಲಿಸಿಕೊಳ್ಳಿ ಎಂಬುದು ನನ್ನ ಸಲಹೆ ಎಂದು ಕಿವಿಮಾತು ಹೇಳಿದರು.